ADVERTISEMENT

ಪ್ರಬಲವಾದ ‘ಇಂಡಿ’ ಪ್ರತ್ಯೇಕ ಜಿಲ್ಲೆ ಕೂಗು

ಶಾಸಕ ಯಶವಂತರಾಯಗೌಡರ ಕನಸಿಗೆ ರಕ್ಕೆಪುಕ್ಕೆ

ಎ.ಸಿ.ಪಾಟೀಲ
Published 19 ಫೆಬ್ರುವರಿ 2023, 10:07 IST
Last Updated 19 ಫೆಬ್ರುವರಿ 2023, 10:07 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ಇಂಡಿ: ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಇಂಡಿ ತಾಲ್ಲೂಕು ಅಭಿವೃದ್ಧಿಯಾಗಬೇಕು ಎಂದಾದರೆ ಅದು ಹೊಸ ಜಿಲ್ಲೆಯಾಗಿ ರೂಪುಗೊಳ್ಳಬೇಕಿದೆ ಎಂಬ ಕೂಗು ಆರಂಭವಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ, ಚಡಚಣ, ದೇವರಹಿಪ್ಪರಿ, ಸಿಂದಗಿ ಮತ್ತು ಆಲಮೇಲ ತಾಲ್ಲೂಕುಗಳನ್ನು ಒಳಗೊಂಡು ಇಂಡಿ ನೂತನ ಜಿಲ್ಲೆಯಾಗಬೇಕಿದೆ ಎಂಬ ಬೇಡಿಕೆ ನಿಧಾನವಾಗಿ ಬಲಗೊಳ್ಳತೊಡಗಿದೆ.

ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಕೂಗು ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದಲೇ ಮೊದಲು ಆರಂಭವಾಗಿರುವುದು ವಿಶೇಷ.

ADVERTISEMENT

ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂದು ಯಶವಂತರಾಯಗೌಡ ಪಾಟೀಲ ಗಟ್ಟಿಯಾದ ಧ್ವನಿ ಎತ್ತಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ ಯಾವುದೇ ಜಿಲ್ಲೆ ಇಬ್ಬಾಗಿಸಿ ಹೊಸ ಜಿಲ್ಲೆಯಾಗಿಸಲು ಹೊರಟರೆ ಇಂಡಿ ಕೂಡಾ ಜಿಲ್ಲೆಯನ್ನಾಗಿ ಮಾಡಲೇಬೇಕು ಎಂದು ಪಟ್ಟು ಹಾಕಿದ್ದಾರೆ.

ಇಂಡಿ ಇದೀಗ ಜಿಲ್ಲೆಯಾಗಲು ಎಲ್ಲ ವಿಧದಲ್ಲೂ ಅರ್ಹತೆ ಗಳಿಸಿದೆ. ಇಂಡಿ ಪಟ್ಟಣದಲ್ಲಿ ಕಳೆದ 40 ವರ್ಷಗಳಿಂದ ವಿಭಾಗೀಯ ಕಚೇರಿಗಳಾದ ಉಪಕಂದಾಯ ವಿಭಾಗಾಧಿಕಾರಿಗಳ ಕಚೇರಿ, ಡಿವೈಎಸ್ಪಿ ಕಚೇರಿ, ಕೆಬಿಜೆಎನ್ ಎಲ್ ವಿಭಾಗ ಕಚೇರಿ, ಬಸ್ ಡಿಪೋ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲದೇ ಇತ್ತೀಚೆಗೆ ಶಾಸಕ ಯಶವಂತರಾಯಗೌಡ ಪಾಟೀಲರ ಪ್ರಯತ್ನದಿಂದ ರಾಜ್ಯ ಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ, ಕೃಷಿ ಉಪ ನಿರ್ದೇಶಕರ ಕಚೇರಿ-2, ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಲಾಗಿದೆ.

ಇಂಡಿ ತಾಲ್ಲೂಕು ಹೆಸರಾಂತ ಜಾನಪದ ಸಾಹಿತಿಗಳಾದ ಹಲಸಂಗಿ ಮಧುರಚೆನ್ನರು, ಸಿಂಪಿ ಲಿಂಗಣ್ಣ, ಅಗರಖೇಡದ ಶ್ರೀರಂಗರ ಬೀಡಾಗಿದೆ. ಬಂಥನಾಳದ ಸಂಗನಬಸವ ಶ್ರೀಗಳು, ಲಚ್ಯಾಣದ ಸಿದ್ದಲಿಂಗ ಮಹಾರಾಜರ ನಾಡಾಗಿದೆ.
ಚಡಚಣ ಪಟ್ಟಣ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿರುವ ಮುಖ್ಯ ವ್ಯಾಪಾರಿ ಕೇಂದ್ರವಾಗಿದ್ದು, ಈ ಪಟ್ಟಣಕ್ಕೆ ಮಹಾರಾಷ್ಟ್ರದ ಸುಮಾರು 20 ಗ್ರಾಮಗಳ ಜನ ಬಂದು ವ್ಯವಹಾರ ಮಾಡುತ್ತಾರೆ. ಇಂಡಿ ಮತ್ತು ಆಲಮೇಲ ಕೃಷಿಗೆ ಮತ್ತು ಹಣ್ಣಿನ ಬೆಳೆಗಳಿಗೆ ಪ್ರಮುಖ ಪಟ್ಟಣಗಳು, ಸಿಂದಗಿ ಮತ್ತು ದೇವರಹಿಪ್ಪರಗಿ ಪಟ್ಟಣಗಳು ಹೆದ್ದಾರಿಯಲ್ಲಿದ್ದು ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾಗಿದೆ.

ಇಂಡಿ ತಾಲ್ಲೂಕಿನ ಗಡಿಗೆ ಸುಮಾರು 90 ಕಿ. ಮೀ. ಮತ್ತು ಆಲಮೇಲ ತಾಲ್ಲೂಕಿನ ಗಡಿಗೆ ಸುಮಾರು 60 ಕಿ.ಮೀ.ವರೆಗೆ ಭೀಮಾ ನದಿ ಹೊಂದಿಕೊಂಡು ಹರಿದಿದೆ. ಇಂಡಿ ತಾಲ್ಲೂಕಿನಲ್ಲಿ ಹರಿದಿರುವ ಭೀಮಾ ನದಿಗೆ ಅಡ್ಡಲಾಗಿ 8 ಬ್ಯಾರೇಜುಗಳು ಮತ್ತು ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಬಳಿ ಭೀಮಾ ನದಿಗೆ ಒಂದು ದೊಡ್ಡ ಪ್ರಮಾಣದ ಬ್ಯಾರೇಜ್ ನಿರ್ಮಿಸಿ, ನೀರಾವರಿಗೆ ಅನುಕೂಲ ಮಾಡಲಾಗಿದೆ.

ಈ ಎಲ್ಲಾ ನೀರಾವರಿ ಯೋಜನೆಯಿಂದ ಇಂಡಿ ಮತ್ತು ಆಲಮೇಲ ತಾಲ್ಲೂಕುಗಳ ಸುಮಾರು 32 ಗ್ರಾಮಗಳ ರೈತರಿಗೆ ತಮ್ಮ ಜಮೀನುಗಳನ್ನು ನೀರಾವರಿಗೆ ಪರಿವರ್ತಿಸಿಕೊಂಡು ಕಬ್ಬು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಲಿಂಬೆ, ದ್ರಾಕ್ಷಿ, ಪೇರು, ದಾಳಿಂಬೆ, ಬಾರಿ, ಬಾಳೆ, ವಾಣಿಜ್ಯ ಬೆಳೆಗಳಾದ ಹತ್ತಿ, ಕಡಲೆ, ಜೋಳ, ತೊಗರಿ ತಮ್ಮ ಪ್ರಮುಖ ಬೆಳೆಗಳಾಗಿ ಬೆಳೆಯುತ್ತಿದ್ದಾರೆ. ಇದನ್ನರಿತುಕೊಂಡೇ ಈ ಭಾಗದಲ್ಲಿ ಕಳೆದ 5-6 ವರ್ಷಗಳಲ್ಲಿ 5 ಖಾಸಗಿ ಮತ್ತು ಒಂದು ಸಹಕಾರಿ ಸಂಘದ ಮೂಲಕ ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿವೆ. ಇವುಗಳ ಜೊತೆಗೆ ಹತ್ತಿ ಮಿಲ್‌ಗಳು, ಬೇಳೆ ಕಾಳು ಕಾರ್ಖಾನೆಗಳು, ಲಿಂಬೆ ಸಂಸ್ಕರಣಾ (ಜೂಸ್) ಘಟಕಗಳು ಅಭಿವೃದ್ಧಿ ಹೊಂದಬೇಕಾದರೆ ಇಂಡಿಯನ್ನು ಜಿಲ್ಲೆಯಾಗಿಸುವುದು ಅಗತ್ಯವಾಗಿದೆ ಎನ್ನುವ ಕೂಗು ಜನಸಾಮಾನ್ಯರಲ್ಲಿ ಎದ್ದಿದೆ.

ಈ ಎಲ್ಲಾ ತಾಲ್ಲೂಕುಗಳ ಮೇಲ್ಭಾಗದಲ್ಲಿ ಕೃಷ್ಣಾ ನದಿಯಿಂದ ಕಾಲುವೆಗಳು ಬಂದಿವೆ. ಕೃಷ್ಣಾ ಮತ್ತು ಭೀಮಾ ನದಿಗಳ ನೀರಿನ ಸಂಪೂರ್ಣ ಅಭಿವೃದ್ಧಿ ಹೊಂದಬೇಕಾದರೆ ಇಂಡಿ ಜಿಲ್ಲೆಯನ್ನಾಗಿ ಪರಿವರ್ತಿಸಿ ಆಡಳಿತಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಈ ಭಾಗದ ರೈತರು, ಸಾಹಿತಿಗಳು, ವ್ಯಾಪಾರಸ್ಥರು, ವಿವಿಧ ಉದ್ಯೋಗಿಗಳು ಆಗ್ರಹಿಸುತ್ತಿದ್ದಾರೆ.

ಇಂಡಿ ಪಟ್ಟಣ ಈಗಾಗಲೇ 50 ಸಾವಿರ ಜನಸಂಖ್ಯೆ ಮೀರಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಭೌಗೋಳಿಕವಾಗಿ ಅತ್ಯಂತ ದೊಡ್ಡ ಪಟ್ಟಣವಾಗಿದೆ. ಜಿಲ್ಲಾ ಕೇಂದ್ರವಾಗಲು ಅಗತ್ಯವಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಸರಿಗಟ್ಟುವ ಮಿನಿ ವಿಧಾನ ಸೌಧ, ಕ್ರೀಡಾಂಗಣ, ಹೆಲಿಪ್ಯಾಡ್, ಪದವಿ, ಪದವಿಪೂರ್ವ, ಡಿಪ್ಲೋಮಾ, ಐಟಿಐ, ಬಿ.ಇಡಿ ಕಾಲೇಜು, ಸಿಬಿಎಸ್‌ಸಿ ಶಾಲೆಗಳು ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳು ಮತ್ತು ಅವೆಲ್ಲವುಗಳಿಗೆ ಸ್ವಂತ ಸುಸಜ್ಜಿತ ಕಟ್ಟಡಗಳು ನಿರ್ಮಾಣಗೊಂಡಿವೆ.

ಔಧ್ಯೋಗಿಕರಣಕ್ಕಾಗಿ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದೆ. ಬ್ರಾಡ್ ಗೇಜ್ ಇರುವ ರೈಲು ಸಂಚಾರ ವ್ಯಸವ್ಥೆಯಿದೆ. ಇಂಡಿಯಿಂದ ಬೆಂಗಳೂರು, ಮುಂಬೈ, ದೆಹಲಿಗೆ ನೇರ ಸಂಪರ್ಕವಿದೆ. ಇವೆಲ್ಲವುಗಳನ್ನು ಗುರುತಿಸಿ ಇಂಡಿ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಪರಿವರ್ತಿಸಿದರೆ ಕೆಲವೇ ವರ್ಷಗಳಲ್ಲಿ ಇಂಡಿ ಕರ್ನಾಟಕದಲ್ಲಿಯೇ ಒಂದು ಪ್ರಮುಖ ಜಿಲ್ಲೆಯಾಗಿ ಹೊರಹೊಮ್ಮುವದರಲ್ಲಿ ಸಂಶಯವಿಲ್ಲ. ಇಲ್ಲಿ ಬೆಳೆಯುವ ಲಿಂಬೆ ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಪ್ರಮುಖಸ್ಥಾನ ಪಡೆದುಕೊಂಡಿದೆ.

ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿರುವ ಇಂಡಿ ಜಿಲ್ಲೆಯಾದರೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವದಲ್ಲದೇ ವ್ಯಾಪಾರ, ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳುವ ನಮ್ಮ ಜನ ಇಲ್ಲಿಯೇ ತಮ್ಮ ವ್ಯಾಪಾರ, ಉದ್ಯೋಗ, ವಹಿವಾಟು ಮಾಡುವಂತಾಗುತ್ತದೆ. ಇದನ್ನರಿತು ತಾಲ್ಲೂಕಿನ ಬುದ್ದಿ ಜೀವಿಗಳು, ಪ್ರಗತಿಪರ ರೈತರು, ವೈದ್ಯರು, ವಕೀಲರು, ಬೆಂಬಲ ನೀಡಿದ್ದಾರೆ. ಇಂಡಿ ಜಿಲ್ಲೆಯಾಗಿಸಲು ಹೋರಾಟಕ್ಕೂ ಅಣಿಯಾಗ ತೊಡಗಿದ್ದಾರೆ.

***


ಇಂಡಿ ತಾಲ್ಲೂಕನ್ನು ನೂತನ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಸಸಿ ನೆಟ್ಟಿದ್ದೇನೆ. ಕೆಲವೇ ವರ್ಷಗಳಲ್ಲಿ ಈ ಸಸಿ ಹೆಮ್ಮರವಾಗಿ ಬೆಳೆಯುವ ವಿಶ್ವಾಸವಿದೆ

–ಯಶವಂತರಾಯಗೌಡ ಪಾಟೀಲ, ಶಾಸಕ

***

ಇಂಡಿ ಜಿಲ್ಲೆಯಾಗಲು ಅರ್ಹತೆ ಹೊಂದಿದೆ. ವಿಜಯಪುರ ಜಿಲ್ಲೆಯಲ್ಲಿ 13 ತಾಲ್ಲೂಕುಗಳಲ್ಲಿ 5 ತಾಲ್ಲೂಕುಗಳನ್ನೊಳಗೊಂಡು ಇಂಡಿ ಜಿಲ್ಲೆಯನ್ನಾಗಿ ಮಾಡಿದರೆ ಅಭಿವೃದ್ಧಿಹೊಂದುವರದಲ್ಲಿ ಯಾವುದೇ ಸಂದೇಹವಿಲ್ಲ

–ಆರ್.ವಿ.ಪಾಟೀಲ, ಅಧ್ಯಕ್ಷ, ಶರಣ ಸಾಹಿತ್ಯ ಪರಿಷತ್, ಇಂಡಿ ಘಟಕ

***

ಇಂಡಿ ಜಿಲ್ಲೆಯಾದರೆ ರೈತರ ಕೆಲಸಗಳು ಸುಲಭವಾಗುತ್ತವೆ. ಗಡಿಭಾಗದಲ್ಲಿರುವ ಇಂಡಿ ಕೃಷಿ ಪ್ರಧಾನ ತಾಲ್ಲೂಕು. ಕೃಷಿಗೆ ಪೂರಕವಾಗಿರುವ ಕೆಲಸಗಳ ಅಭಿವೃದ್ಧಿಗೆ ಜಿಲ್ಲೆಯಾಗುವುದು ಅಗತ್ಯವಾಗಿದೆ.

ಎನ್.ಜಿ.ರೊಳ್ಳಿ, ಅಧ್ಯಕ್ಷ, ಕಸಾಪ, ಇಂಡಿ

***

ಇಂಡಿ ಜಿಲ್ಲೆಯಾದರೆ ಸರ್ಕಾರದ ಗಮನ ಸೆಳೆಯುತ್ತದೆ. ಸಂಪರ್ಕ ಹೆಚ್ಚಾಗಿತ್ತದೆ. ಅಭಿವೃದ್ಧಿಗೆ ಸಹಾಯವಾಗುತ್ತದೆ. ಕಾರಣ ಈ ಕಾರ್ಯಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಿತ್ತೇನೆ. ತಾಲ್ಲೂಕಿನ ಎಲ್ಲಾ ಜನಸಮುದಾಯ ಬೆಂಬಲಿಸಬೇಕು.

–ಎಸ್.ಟಿ.ಪಾಟೀಲ,ಪ್ರಗತಿಪರ ರೈತ,ನಾದ ಕೆಡಿ

***

ಇಂಡಿ ಜಿಲ್ಲೆಯಾಗಲು ಪಕ್ಷಾತೀತ ಬೆಂಬಲ ನೀಡಬೇಕು. ಜಿಲ್ಲೆಯಾದರೆ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.

ಸೋಮು ನಿಂಬರಗಿಮಠ, ವಕೀಲ

***

ತಾಲ್ಲೂಕು ರೈತಾಪಿ ಜನರಿಂದ ಕೂಡಿದೆ. ಜಿಲ್ಲೆಯಾದರೆ ರೈತಾಪಿ ಜನರ ಬದುಕು ಹಸನಾಗುತ್ತದೆ. ಈ ಕೆಲಸಕ್ಕೆ ಪಕ್ಷ, ಜಾತಿ, ಮತ ಪಂತಗಳನ್ನು ಬದಿಗಿಟ್ಟು ಬೆಂಬಲಸಬೇಕು ಮತ್ತು ಹೋರಾಟ ಮಾಡಬೇಕು

***

ಡಿ.ಎನ್.ಅಕ್ಕಿ, ಸಾಹಿತಿ

ಇಂಡಿ ಗಡಿನಾಡಿನಲ್ಲಿದೆ. ಕೃಷಿಪ್ರಧಾನವಾದ ಪ್ರದೇಶವಾಗಿದ್ದು, ಶೇ 50 ಭಾಗ ನೀರಾವರಿಯಾಗಿದೆ. ಇನ್ನರ್ಧ ಭಾಗ ನೀರಾವರಿಯಾಗಲಿದೆ. ಇದರ ಅಭಿವೃದ್ಧಿಗೆ ಇಂಡಿ ಜಿಲ್ಲೆಯಾಗಬೇಕು.

–ಮುರುಘೇಂದ್ರ ಶಿವಾಚಾರ್ಯರು, ಅಧ್ಯಕ್ಷ, ಇಂಡಿ ಜಿಲ್ಲೆ ಮಠಾಧೀಶರ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.