ADVERTISEMENT

ಆಮ್ಲಜನಕ ನಿರಂತರ ಪೂರೈಕೆಗೆ ಕ್ರಮ: ಡಿ.ಸಿ

ಅನಾವಶ್ಯಕ ಆತಂಕ ಬೇಡ; ಖಾಸಗಿ ಆಸ್ಪತ್ರೆಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮೇ 2021, 15:16 IST
Last Updated 9 ಮೇ 2021, 15:16 IST
ಪಿ.ಸುನೀಲ್‌ ಕುಮಾರ್
ಪಿ.ಸುನೀಲ್‌ ಕುಮಾರ್   

ವಿಜಯಪುರ: ಕೋವಿಡ್ ಚಿಕಿತ್ಸೆ ನೀಡುತ್ತಿರುವ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಪ್ರತಿದಿನ ಆಮ್ಲಜನಕ ಲಭ್ಯತೆ ಆಧಾರದ ಮೇಲೆ ಹಾಗೂ ಆಸ್ಪತ್ರೆಗಳಲ್ಲಿನ ಕೋವಿಡ್ ರೋಗಿಗಳ ಪ್ರಮಾಣಕ್ಕೆ ಅನುಗುಣವಾಗಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಆಮ್ಲಜನಕವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ತಹಶೀಲ್ದಾರರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್-19 ವೈದ್ಯಕೀಯ ಆಮ್ಲಜನಕ ಪೂರೈಕೆ ಮತ್ತು ನಿರ್ವಹಣೆ ಕುರಿತಂತೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈದ್ಯಕೀಯ ಆಮ್ಲಜನಕ ಬೇಡಿಕೆ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಿದರು.

ADVERTISEMENT

ಪ್ರಸ್ತುತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಲಕರ್ಣಿ ಗ್ಯಾಸ್ ಏಜೆನ್ಸಿ ಮತ್ತು ಎಂ.ಆರ್. ಗ್ಯಾಸಸ್ ಏಜೆನ್ಸಿ ಮೇಲ್ವಿಚಾರಣೆ ಕುರಿತು ತಹಶೀಲ್ದಾರರನ್ನು ಕ್ಯಾಂಪ್ ಅಧಿಕಾರಿಗಳೆಂದು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಿ ಈ ಅಧಿಕಾರಿಗಳು 24X7 ಆಮ್ಲಜನಕ ತಯಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ ಎಂದರು.

ಈ ಕ್ಯಾಂಪ್ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ನಿರಂತರವಾಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಈಗಾಗಲೇ ಆಸ್ಪತ್ರೆಗಳಿಗೆ ಹಂಚಿಕೆ, ನಿಗದಿಯಾಗಿರುವ ಪ್ರಕಾರ ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ಖಾಸಗಿ ಆಸ್ಪತ್ರೆಗಳು ಅನಾವಶ್ಯಕವಾಗಿ ಆತಂಕಕ್ಕೆ ಒಳಗಾಗಬಾರದು ಹಾಗೂ ಜಿಲ್ಲಾಡಳಿತದ ಮೇಲೆ ಅನಾವಶ್ಯಕವಾಗಿ ಒತ್ತಡ ಹೇರಬಾರದು ಎಂದು ಹೇಳಿದರು.

ಕೋವಿಡ್ ಚಿಕಿತ್ಸೆ ನೀಡುತ್ತಿರುವ ಎಲ್ಲ ಆಸ್ಪತ್ರೆಗಳಿಗೆ ಗ್ರೂಪ್-ಎ ಮತ್ತು ಬಿ ವರ್ಗದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ಈಗಾಗಲೇ ನೇಮಿಸಲಾಗಿದೆ. ಈ ನೋಡಲ್ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ಆಸ್ಪತ್ರೆಗಳಿಗೆ ನಿರಂತರ ಭೇಟಿ ನೀಡುವ ಮೂಲಕ ಅಲ್ಲಿನ ಹಾಸಿಗೆಗಳ ಲಭ್ಯತೆಯನ್ನು ಪರಿಶೀಲಿಸಬೇಕು. ಒಂದು ವೇಳೆ ಹಾಸಿಗೆ ಲಭ್ಯತೆ ಇದ್ದಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಪಾಲಿಕೆ ಆಯುಕ್ತರು ಶ್ರೀಹರ್ಷ ಶೆಟ್ಟಿ, ಡಾ. ಔದ್ರಾಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.