ADVERTISEMENT

ದೇಶಕ್ಕೆ, ಸೈನ್ಯಕ್ಕೆ ಅಗ್ನಿಪಥ ನಿರುಪಯುಕ್ತ

ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 11:08 IST
Last Updated 27 ಜೂನ್ 2022, 11:08 IST
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು 
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು    

ವಿಜಯಪುರ: ದೇಶ ಕಾಯುವ ಯೋಧರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮುಖಂಡ ಅಬ್ದುಲ್‍ಹಮೀದ್‌ ಮುಶ್ರೀಫ್ ಮಾತನಾಡಿ, ಅಗ್ನಿಪಥ ಯೋಜನೆಯಿಂದ ದೇಶಕ್ಕೆ ಹಾಗೂ ಸೈನ್ಯಕ್ಕೆ ಯಾವುದೇ ಉಪಯುಕ್ತವಿಲ್ಲ. ಈ ದೇಶದ ಯುವಕರು ಇನ್ನಷ್ಟು ನಿರುದ್ಯೋಗಿಗಳಾಗುವ ಯೋಜನೆಯಾಗಿದೆ. ಇದು ದೇಶಕ್ಕೆ ಹಾಗೂ ಸೈನ್ಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದರು.

ಈ ಯೋಜನೆ ವಾಪಸ್ಸು ಪಡೆದುಕೊಳ್ಳಬೇಕೆಂದು ಇಡೀ ರಾಷ್ಟ್ರದಲ್ಲಿ ಹೋರಾಟಗಳು ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಈ ಯೋಜನೆಯನ್ನು ಬಲವಾಗಿ ಖಂಡಿಸುತ್ತದೆ ಎಂದರು.

ADVERTISEMENT

18 ರಿಂದ 23 ವರ್ಷದೊಳಗಿನ ಯುವಕರಿಗೆ ಸೈನ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು 5 ತಿಂಗಳು ತರಬೇತಿ ನೀಡಿ, ಕೇವಲ ನಾಲ್ಕು ವರ್ಷ ದುಡಿಸಿಕೊಂಡು ಮತ್ತೇ ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದು ಯಾವ ರೀತಿಯ ನ್ಯಾಯ, ಇದರಿಂದ ಸೈನ್ಯಕ್ಕೆ ಆಗುವ ಲಾಭವಾದರೂ ಏನು? ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಈಗಾಗಲೇ ದೇಶದಲ್ಲಿ ನಿರುದ್ಯೋಗ ಹಾಹಾಕಾರಕ್ಕೆ ಹೋಗಿದೆ. ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದು, ಕೇಂದ್ರದ ಬಿಜೆಪಿ ಸರಕಾರಕ್ಕೆ ಶಾಪ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೆ ಮನೆಗೆ ಕಳಿಸುವ ದಿನ ದೂರವಿಲ್ಲ, ಯುವಕರು ಯಾವತ್ತೂ ಧೃತಿಗೆಡಬಾರದು, ಕಾಂಗ್ರೆಸ್ ಪಕ್ಷವು ತಮ್ಮ ಬೆಂಬಲಕ್ಕೆ ನಿಂತಿದ್ದು, ಒಂದುವೇಳೆ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ವಾಪಸ್‌ ಪಡೆಯದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.

ಕಾಂಗ್ರೆಸ್ ಪಕ್ಷ ಕಟ್ಟಿದಂತಹ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ದೇಶದ ಸೈನ್ಯವನ್ನು ಖಾಸಗೀಕರಣ ಮಾಡಲು ಹೊರಟಿರುವುದು ದುರದೃಷ್ಟಕರವಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮಹ್ಮದ್‌ ರಫೀಕ್‌ ಟಪಾಲ್‌, ಡಿಸಿಸಿ ಉಪಾಧ್ಯಕ್ಷ ಆಜಾದ್‌ ಪಟೇಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಸಂತ ಹೊನಮೊಡೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಛಾಯಾಗೋಳ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರತಿ ಶಹಾಪೂರ, ಡಿಸಿಸಿ ಉಪಾಧ್ಯಕ್ಷರಾದ ಮಹಾದೇವಿ ಗೋಕಾಕ, ಸೋಮನಾಥ ಕಳ್ಳಿಮನಿ, ಇರ್ಫಾನ್‌ ಶೇಖ್‌, ಪ್ರಭಾವತಿ ನಾಟಿಕಾರ, ಶಬ್ಬೀರ್‌ ಜಾಗೀರದಾರ,ಭಾರತಿ ಹೊಸಮನಿ, ಆಸ್ಮಾ ಕಾಲೇಬಾಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

****

ಅಗ್ನಿಪಥ ಆರ್‌ಎಸ್‍ಎಸ್ ಪ್ರಾಯೋಜಿತ ಯೋಜನೆಯಾಗಿದ್ದು, ಯೋಜನೆಯಲ್ಲಿ ಆರ್‌ಎಸ್‌ಎಸ್‌ ಅಜೆಂಡಾ ಎದ್ದು ಕಾಣುತ್ತಿದೆ. ಅಗ್ನಿಪಥ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಆರ್‌ಎಸ್‌ಎಸ್‌ ಮಾಡುತ್ತಿದೆ

–ಅಬ್ದುಲ್‍ಹಮೀದ್‌ ಮುಶ್ರೀಫ್, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.