ಆಲಮಟ್ಟಿ: ಜೂನ್ ಎರಡನೆಯ ವಾರದಲ್ಲೇ ಆಲಮಟ್ಟಿ ಜಲಾಶಯ ತನ್ನ ಸಂಗ್ರಹ ಸಾಮರ್ಥ್ಯದ ಅರ್ಧದಷ್ಟು ಭರ್ತಿಯಾಗಿದೆ. 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 62.271 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಜಲಾಶಯದಲ್ಲಿ 12,134 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಮಟ್ಟ 514.91 ಮೀಟರ್ ಇದೆ. ಜಲಾಶಯ ಅರ್ಧದಷ್ಟು ಭರ್ತಿಯಾದ ಕಾರಣ ಎರಡು ದಿನಗಳಿಂದ 2,000 ಕ್ಯೂಸೆಕ್ ಇದ್ದ ಹೊರಹರಿವನ್ನು ಶುಕ್ರವಾರ 6,000 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.
‘ಜಲಾಶಯದ ಹಿನ್ನೀರಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಮುಂದಿನ ಕೆಲ ದಿನಗಳವರೆಗೆ ಒಳಹರಿವು ಹೆಚ್ಚಿರಲಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಹಂತ ಹಂತವಾಗಿ ಹೊರಹರಿವು ಹೆಚ್ಚಿಸಲಾಗುತ್ತಿದೆ’ ಎಂದು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್ಎಲ್) ಅಧಿಕಾರಿಗಳು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರವಿಲ್ಲ. ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರದ ರಾಜಾಪುರ ಬಳಿ ಕೃಷ್ಣೆಯ ಹರಿವು 9,000 ಕ್ಯೂಸೆಕ್ ಇದ್ದು, ದೂಧಗಂಗಾ ನದಿ ಬಂದು ಸೇರುವ ಕಲ್ಲೋಳ ಬ್ಯಾರೇಜ್ ಬಳಿ 16,000 ಕ್ಯೂಸೆಕ್ ಹರಿವಿದೆ. ಹೀಗಾಗಿ, ಆಲಮಟ್ಟಿ ಜಲಾಶಯದ ಒಳಹರಿವು 18,000 ಕ್ಯೂಸೆಕ್‌ವರೆಗೆ ಹೆಚ್ಚಳವಾಗಲಿದೆ.
ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ಕೊಯ್ನಾ ಜಲಾಶಯ ಮತ್ತು ದೂಧಗಂಗಾ ಜಲಾಶಯಗಳು ಶೇ 21ರಷ್ಟು, ವಾರಣಾ ಹಾಗೂ ಧೋಮ ಜಲಾಶಯಗಳು ಶೇ 40 ರಷ್ಟು, ಕನ್ಹೇರ ಜಲಾಶಯ ಶೇ 41ರಷ್ಟು ಭರ್ತಿಯಾಗಿವೆ. ಅವು ಭರ್ತಿಯಾಗಿ, ನೀರು ಹರಿಸಿದರೆ ಆಲಮಟ್ಟಿ ಜಲಾಶಯದ ಒಳಹರಿವು ಒಂದು ಲಕ್ಷ ಕ್ಯೂಸೆಕ್ ದಾಟಲಿದೆ. ಸದ್ಯಕ್ಕೆ ಅಷ್ಟು ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವುದಿಲ್ಲ, ಪ್ರವಾಹದ ಆತಂಕ ಇಲ್ಲ’ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.
ಜಲಾಶಯದ ಒಳಹರಿವು ಕ್ರಮೇಣ ಹೆಚ್ಚಳವಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆಡಿ.ಬಸವರಾಜ ಮುಖ್ಯ ಎಂಜಿನಿಯರ್ ಕೆಬಿಜೆಎನ್‌ಎಲ್
ಕಾಲುವೆಗಳ ಹೂಳು ತೆಗೆದು ನೀರು ಹರಿಸಲು ಅಧಿಕಾರಿಗಳು ತ್ವರಿತಗತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕುಬಸವರಾಜ ಕುಂಬಾರ ಅಧ್ಯಕ್ಷ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.