ADVERTISEMENT

ವಿಜಯಪುರ | ಆಲಮಟ್ಟಿ ಬಹುತೇಕ ಭರ್ತಿ, ಬಾಗಿನ ಅರ್ಪಣೆಯ ಸದ್ದು

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಕೆಬಿಜೆಎನ್‌ಎಲ್: ಶೀಘ್ರ ನಿಗದಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:06 IST
Last Updated 13 ಆಗಸ್ಟ್ 2025, 5:06 IST
ಆಲಮಟ್ಟಿ ‌ಜಲಾಶಯದ ಬಹುತೇಕ ಭರ್ತಿ ಯಾಗಿದ್ದು, ಜಲಾಶಯ ಸೋಮವಾರ ಕಂಡು ಬಂದಿದ್ದು ಹೀಗೆ
ಆಲಮಟ್ಟಿ ‌ಜಲಾಶಯದ ಬಹುತೇಕ ಭರ್ತಿ ಯಾಗಿದ್ದು, ಜಲಾಶಯ ಸೋಮವಾರ ಕಂಡು ಬಂದಿದ್ದು ಹೀಗೆ   

ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಕಡಿಮೆಯಾಗಿದೆ. ಒಂದು ವಾರದಿಂದ ಜಲಾಶಯದ ಹೊರಹರಿವು ಕಡಿಮೆ ಮಾಡಿದ್ದರಿಂದ ಜಲಾಶಯ ಬಹುತೇಕ ಆಗಸ್ಟ್‌ 15ರ ವೇಳೆ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ.

ಆಗಸ್ಟ್‌ 15 ರವರೆಗೆ ಜಲಾಶಯ ಭರ್ತಿ ಮಾಡುವುದಿಲ್ಲ. ಆಗಸ್ಟ್‌ನಲ್ಲಿಯೂ ಪ್ರವಾಹ ಸ್ಥಿತಿಗತಿ, ಒಳಹರಿವು ಏರುಮುಖವಾಗಿದ್ದರೇ, ಅವಾಗಲೂ ಜಲಾಶಯ ಭರ್ತಿ ಮಾಡುವುದಿಲ್ಲ. ಸದ್ಯಕ್ಕೆ ಒಳಹರಿವು ಕೂಡ ಕಡಿಮೆಯಿದ್ದು, ಪ್ರವಾಹದ ಸ್ಥಿತಿಯಿಲ್ಲ. ಹೀಗಾಗಿ ಆಗಸ್ಟ್‌ 15ಕ್ಕೆ ಜಲಾಶಯದ ಭರ್ತಿಯಾಗುವ ಸಾಧ್ಯತೆಯಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.

ಹೊರಹರಿವು ಸ್ಥಗಿತಗೊಳಿಸಿದ್ದರೇ ಜೂನ್ ಅಂತ್ಯಕ್ಕೆ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ, ಕೇಂದ್ರ ಜಲ ಆಯೋಗದ ಮಾರ್ಗದರ್ಶನದ ಅನ್ವಯ ಜಲಾಶಯವನ್ನು ಕೆಲ ಮಾನದಂಡ ಅನುಸರಿಸಿ ಭರ್ತಿ ಮಾಡಲಾಗುತ್ತದೆ.

ADVERTISEMENT

ಉಂಟಾಗದ ಪ್ರವಾಹ: ಈ ವರ್ಷ ಮುಂಗಾರು ಮಳೆ ಉತ್ತಮವಾಗಿದೆ ಎಂಬ ಹವಾಮಾನ ವರದಿ, ಇದೇ ಮೊದಲ ಬಾರಿ ಮೇ 19 ರಂದೇ ಅತಿಬೇಗನೆ ಜಲಾಶಯದ ಒಳಹರಿವು ಆರಂಭಗೊಂಡಿದ್ದರಿಂದ ಜಲಾಶಯ ಅರ್ಧ ಭರ್ತಿಯಾಗುವ ಮುನ್ನವೇ ಅಂದರೇ ಮೇ 30 ರಂದೇ ಜಲಾಶಯದಿಂದ ನೀರು ಬಿಡಲು ಆರಂಭಿಸಲಾಗಿದೆ.

ಇದರಿಂದಾಗಿ ಜಲಾಶಯಕ್ಕೆ 1.20 ಲಕ್ಷ ಕ್ಯುಸೆಕ್‌ಗೂ ಅಧಿಕ ಒಳಹರಿವು ಬಂದು, 1.40 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಜಲಾಶಯದ ಮುಂಭಾಗದಲ್ಲಿ ಯಾವುದೇ ಪ್ರವಾಹ ಸ್ಥಿತಿ ಉಂಟಾಗಲಿಲ್ಲ. ಕೆಬಿಜೆಎನ್ಎಲ್ ಅಧಿಕಾರಿಗಳು ಈ ಬಾರಿ ಮುಂಜಾಗ್ರತೆ ಕ್ರಮ ಅನುಸರಿಸಿದ್ದರಿಂದ ಈ ಬಾರಿ ಜಲಾಶಯದ ಹಿಂಭಾಗ ಹಾಗೂ ಮುಂಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗುವುದು ಮತ್ತೀತರ ಯಾವುದೇ ಅನಾಹುತಗಳು ಸಂಭವಿಸಲಿಲ್ಲ.

ಬಾಗಿನದ ಸದ್ದು: ಜೂನ್ ತಿಂಗಳಲ್ಲಿಯೇ ಮಂಡ್ಯ ಜಿಲ್ಲೆಯ ಕೆಆರ್.ಎಸ್. ಜಲಾಶಯ ಭರ್ತಿಯಾಗಿದ್ದರಿಂದ ಜೂನ್ ತಿಂಗಳಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾಗಿನ ಅರ್ಪಿಸಿದ್ದರು. ಈಗ ಆಲಮಟ್ಟಿ ಜಲಾಶಯ ಭರ್ತಿಯತ್ತ ಸಾಗಿದೆ. ಹೀಗಾಗಿ ಕೃಷ್ಣೆಯ ಜಲಧಿಗೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಬೇಕು ಎಂಬ ಕೂಗು ಆರಂಭಗೊಂಡಿದೆ.

’ಶೀಘ್ರವೇ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಬೇಕುಠ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಒತ್ತಾಯಿಸಿದರು.

ಆಲಮಟ್ಟಿ ಜಲಾಶಯದ ಮಟ್ಟ: 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 519.52 ಮೀ. ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 32,395 ಕ್ಯೂಸೆಕ್ ಒಳಹರಿವು ಇದ್ದು, 30,370 ಕ್ಯೂಸೆಕ್ ನೀರನ್ನು ನದಿಪಾತ್ರದಿಂದ ಹರಿಬಿಡಲಾಗುತ್ತಿದೆ. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 121.606 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೂ 2 ಟಿಎಂಸಿ ಅಡಿ ನೀರು ಮಾತ್ರ ಬಾಕಿ ಇದೆ.

ಶೀಘ್ರವೇ ಬಾಗಿನ: ಜಲಾಶಯ ಬಹುತೇಕ ಭರ್ತಿಯಾಗಿದ್ದು, ಬಾಗಿನ ಅರ್ಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಾಗಿನ ಅರ್ಪಣೆಗಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ದಿನ ಶೀಘ್ರವೇ ನಿಗದಿಯಾಗಲಿದೆ ಎಂದು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು. ಆಗಸ್ಟ್‌ ಕೊನೆಯ ವಾರ ಇಲ್ಲವೇ ಸೆಪ್ಟಂಬರ್ ಮೊದಲ ವಾರದಲ್ಲಿ ಬಾಗಿನ ನಡೆಯುವ ಸಾಧ್ಯತೆಯಿದೆ.

ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ

2013ರಲ್ಲಿ ಮುಖ್ಯಮಂತ್ರಿಯಾದ ಬಳಿ ಸಿದ್ಧರಾಮಯ್ಯ 2013, 2014ರಲ್ಲಿ ಮತ್ತು 2017 ರಲ್ಲಿ ಮೂರು ಬಾರಿ ಆಲಮಟ್ಟಿಯ ಕೃಷ್ಣೆ ಬಾಗಿನ ಅರ್ಪಿಸಿದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ 2023 ಮತ್ತು 2024 ರಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿದ್ದಾರೆ.

ಐದು ಬಾರಿ ಯಡಿಯೂರಪ್ಪ ಹಾಗೂ ಸಿದ್ಧರಾಮಯ್ಯ ಇಬ್ಬರೂ ಬಾಗಿನ ಅರ್ಪಿಸಿದ್ದಾರೆ. ಈ ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಾಗಿನ ಅರ್ಪಿಸಿದರೇ ಅದು ಅವರ ಆರನೇ ಬಾಗಿನ ಹಾಗೂ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಕೀರ್ತಿ ಅವರ ಪಾಲಾಗಲಿದೆ.

ಆಲಮಟ್ಟಿ ‌ಜಲಾಶಯದ ಬಹುತೇಕ ಭರ್ತಿ ಯಾಗಿದ್ದು ಜಲಾಶಯ ಸೋಮವಾರ ಕಂಡು ಬಂದಿದ್ದು ಹೀಗೆ
ಆಲಮಟ್ಟಿ ‌ಜಲಾಶಯದ ಬಹುತೇಕ ಭರ್ತಿ ಯಾಗಿದ್ದು ಜಲಾಶಯ ಸೋಮವಾರ ಕಂಡು ಬಂದಿದ್ದು ಹೀಗೆ
ಆಲಮಟ್ಟಿ ‌ಜಲಾಶಯದ ಬಹುತೇಕ ಭರ್ತಿ ಯಾಗಿದ್ದು ಜಲಾಶಯ ಸೋಮವಾರ ಕಂಡು ಬಂದಿದ್ದು ಹೀಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.