ಆಲಮಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಗುರುವಾರವೂ ಮುಂದುವರೆದಿದ್ದು, ಬುಧವಾರ ಸಂಜೆಯಿಂದ ಜಲಾಶಯದಿಂದ ಹೊರಬಿಡುತ್ತಿದ್ದ 70 ಸಾವಿರ ಕ್ಯೂಸೆಕ್ ನೀರು ಗುರುವಾರವೂ ಮುಂದುವರೆದಿದೆ.
ಜಲಾಶಯದ 26 ಗೇಟ್‌ಗಳ ಪೈಕಿ 19 ಗೇಟ್‌ಗಳ ಮೂಲಕ 27,500 ಕ್ಯೂಸೆಕ್ ಹಾಗೂ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 42,500 ಕ್ಯೂಸೆಕ್ ಸೇರಿ ಒಟ್ಟಾರೆ 70 ಸಾವಿರ ಕ್ಯೂಸೆಕ್ ನೀರನ್ನು ನದಿ ತಳಪಾತ್ರಕ್ಕೆ ಹರಿಬಿಡಲಾಗುತ್ತಿದೆ.
ಭಾರಿ ಮಳೆ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವರುಣನ ಅರ್ಭಟ ಮುಂದುವರೆದಿದ್ದು, ಕೊಯ್ನಾ 133ಮಿ.ಮೀ, ನವಜಾ 158 ಮಿ.ಮೀ, ಮಹಾಬಳೇಶ್ವರ 153 ಮಿ.ಮೀ, ರಾಧಾನಗರಿ 86 ಮಿ.ಮೀ, ದೂಧಗಂಗಾ 87 ಮಿ.ಮೀ, ವಾರಣಾ 99 ಮಿ.ಮೀ, ತರಳಿ 40 ಮಿ.ಮೀ, ಧೋಮ 30 ಮಿ.ಮೀ ಮಳೆಯಾಗಿದೆ.
ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣಾ ನದಿಯ ಹರಿವು 56,667 ಕ್ಯೂಸೆಕ್ ಇದೆ, ಕರ್ನಾಟಕದ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ದೂಧಸಾಗರ ನದಿ ಬಂದು ಸೇರುತ್ತಿದ್ದು, ಅದರ ಹರಿವು 14,080 ಕ್ಯೂಸೆಕ್ ಇದೆ. ಘಟಪ್ರಭಾ ನದಿಯ ಹರಿವು 2,000 ಕ್ಯೂಸೆಕ್ ಇದೆ. ಶುಕ್ರವಾರ ನದಿಯ ಹರಿವು ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
70 ಸಾವಿರ ಕ್ಯೂಸೆಕ್ ಒಳಹರಿವು: ಜಲಾಶಯದಲ್ಲಿ ಸದ್ಯ 68.343 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯದ ಶೇ 55.5 ರಷ್ಟು ಮಾತ್ರ ಭರ್ತಿಯಾಗಿದೆ.
ವಿದ್ಯುತ್ ಉತ್ಪಾದನಾ ಕೇಂದ್ರದ ಎಲ್ಲಾ ಆರು ಘಟಕಗಳು ಕಾರ್ಯಾರಂಭ ಮಾಡಿದ್ದು, 225 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಜಲಾಶಯದ ಗೇಟ್‌ಗಳಿಂದ ನೀರು ಬಿಡುವ ಸುಂದರ ದೃಶ್ಯ ರಮಣೀಯವಾಗಿದ್ದು, ನದಿ ತಳಪಾತ್ರಕ್ಕೆ ಜೀವಕಳೆ ಬಂದಂತಾಗಿದೆ.
Quote - ಜಲಾಶಯದ ನೀರಿನ ಒಳಹರಿವಿನ ಅಂಕಿಅಂಶ ಪ್ರತಿ ಗಂಟೆಗೊಮ್ಮೆ ಪರಿಶೀಲಿಸಲಾಗುತ್ತಿದ್ದು ದಿನದ 24 ಗಂಟೆಯೂ ನಿಗಾ ಇಡಲಾಗುತ್ತಿದೆ. ಒಳಹರಿವು ಹೆಚ್ಚಿದರೆ ಹೊರಹರಿವು ಹೆಚ್ಚಿಸಲಾಗುವುದು ಡಿ.ಬಸವರಾಜ ಮುಖ್ಯ ಎಂಜಿನಿಯರಿಂಗ್ ಆಲಮಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.