ADVERTISEMENT

ಅಕ್ಟೋಬರ್‌ 9 ರಂದು ಜಲಾಶಯಕ್ಕೆ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 5:43 IST
Last Updated 10 ಸೆಪ್ಟೆಂಬರ್ 2025, 5:43 IST
ಆಲಮಟ್ಟಿ ಜಲಾಶಯದ ಹಿನ್ನೀರಿನ ಚಂದ್ರಮ್ಮ ದೇವಸ್ಥಾನದ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈತರು ಸೋಮವಾರ ಕೃಷ್ಣೆಗೆ ಬಾಗಿನ ಅರ್ಪಿಸಿದರು
ಆಲಮಟ್ಟಿ ಜಲಾಶಯದ ಹಿನ್ನೀರಿನ ಚಂದ್ರಮ್ಮ ದೇವಸ್ಥಾನದ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈತರು ಸೋಮವಾರ ಕೃಷ್ಣೆಗೆ ಬಾಗಿನ ಅರ್ಪಿಸಿದರು   

ಆಲಮಟ್ಟಿ: ‘ರಾಜ್ಯ ಸರ್ಕಾರ ಅಕ್ಟೋಬರ್‌ 9ರ ಒಳಗಾಗಿ ಆಲಮಟ್ಟಿ ಜಲಾಶಯವನ್ನು ಎತ್ತರಿಸಲು ಕ್ರಮಕೈಗೊಳ್ಳದಿದ್ದರೇ  ರೈತರೇ ಕೂಡಿಕೊಂಡು ಜಲಾಶಯಕ್ಕೆ ನುಗ್ಗಿ, ಅಣೆಕಟ್ಟೆ ಎತ್ತರಿಸುವ ಕಾರ್ಯಾಚರಣೆ ಆರಂಭಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.

ಆಲಮಟ್ಟಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಕಿತ್ತೂರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಆಲಮಟ್ಟಿ ಅಣೆಕಟ್ಟೆಯ ಎತ್ತರ ಈಗಿರುವ 519.6 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲು ಅಗತ್ಯವಿರುವ ಸಲಕರಣೆಗಳನ್ನು, ಉಪಕರಣಗಳನ್ನು ನಾವೇ ತರುತ್ತೇವೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರಕ್ಕೆ ಆಲಮಟ್ಟಿ ಜಲಾಶಯ ಎತ್ತರಿಸುವ ಇಚ್ಛಾಶಕ್ತಿಯೂ ಇಲ್ಲ, ಕಾಲಮಿತಿಯೂ ಇಲ್ಲ, ಈ ವಿಷಯದಲ್ಲೇ ಹಲವಾರು ವರ್ಷಗಳಿಂದ ಎಲ್ಲಾ ಪಕ್ಷದವರು ರಾಜಕಾರಣ ಮಾಡುತ್ತಲೇ ಸಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೃಷ್ಣಾ ನದಿಯ ಫಲಾನುಭವಿಗಳ ಜಿಲ್ಲೆಗಳ ಪ್ರತಿ ಗ್ರಾಮಗಳಲ್ಲಿಯೂ ಅಣೆಕಟ್ಟೆ ಎತ್ತರಿಸುವ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ರೈತ ಸಂಘದ ಕಾರ್ಯಕರ್ತರು ಆಲಮಟ್ಟಿಗೆ ಬರಲಿದ್ದಾರೆ’ ಎಂದರು. 

ಗರಿಷ್ಠ ಪರಿಹಾರ ನೀಡಿ:

ಜಲಾಶಯ ಎತ್ತರಿಸಿ ಯುಕೆಪಿ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವ ಯಾವುದೇ ಗುರಿ ಇಲ್ಲದೇ ಆಲಮಟ್ಟಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಮಿಸಿ ಬಾಗಿನ ಅರ್ಪಿಸುವುದು ಯಾವ ಪುರುಷಾರ್ಥಕ್ಕೆ ಎಂದು ಕೋಡಿಹಳ್ಳಿ ಪ್ರಶ್ನಿಸಿದರು.

ಜಲಾಶಯ ಎತ್ತರದಿಂದ ಬಾಧಿತಗೊಳ್ಳುವ ರೈತರಿಗೆ ಗರಿಷ್ಠ ಪರಿಹಾರ ನೀಡಿ, ಪುನರ್ವಸತಿ ಮತ್ತು ಪುನರ್ ನಿರ್ಮಾಣವನ್ನು ಕಲ್ಪಿಸಬೇಕು ಎಂದರು. 

ಕೃಷ್ಣೆ, ತುಂಗಭದ್ರಾ, ಮಹಾದಾಯಿ ಯೋಜನೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. ಅದೇ ರೀತಿ ಕಾವೇರಿಯಲ್ಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಎರಡೂವರೆ ವರ್ಷದ ಹಿಂದೆ ಆಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪಾದಯಾತ್ರೆ ನಡೆಸಿದ್ದರು. ಈಗ ಅಧಿಕಾರಕ್ಕೆ ಬಂದರೂ ಆ ಯೋಜನೆಗೆ ಕೇಂದ್ರದ ಅನುಮತಿ ಬೇಕು ಎಂದು ಹೇಳುತ್ತಾ ಸುಮ್ಮನಾಗಿದ್ದಾರೆ. ಕೇಂದ್ರದ ಅನುಮತಿ ಬೇಕಿದ್ದರೇ ಪಾದಯಾತ್ರೆ ಏಕೆ ಮಾಡಬೇಕಿತ್ತು? ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.