ಆಲಮಟ್ಟಿ ಜಲಾಶಯ
ವಿಜಯಪುರ: ಆಲಮಟ್ಟಿ ಜಲಾಶಯದ ಹೊರಹರಿವು ಬುಧವಾರ 2.5 ಲಕ್ಷ ಕ್ಯೂಸೆಕ್ ಗೆ ಹೆಚ್ಚಿಸಲಾಗಿದ್ದು, ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಸ್ಥರಿಗೆ ನೆರೆ ಆತಂಕ ಆರಂಭಗೊಂಡಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರದ ಜತೆಗೆ, ರಾಜ್ಯದ ಘಟಪ್ರಭಾ ನದಿಯಿಂದಲೂ ವ್ಯಾಪಕ ನೀರು ಆಲಮಟ್ಟಿ ಜಲಾಶಯದತ್ತ ಹರಿದು ಬರುತ್ತಿದ್ದು, ಬುಧವಾರ ಜಲಾಶಯದ ಒಳಹರಿವು 1,60,694 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯ ತನ್ನ ಗರಿಷ್ಠ ಮಟ್ಟ 519.60 ಮೀಟರ್ ಬಹುತೇಕ ತಲುಪಿತ್ತು. ಆದರೆ, ಮಳೆಯ ಅಬ್ಬರ ಹೆಚ್ಚಾಗಿದ್ದರಿಂದ ಮುಂಜಾಗ್ರತೆಯ ಕ್ರಮವಾಗಿ ಒಂದು ಮೀಟರ್ ಅಂದರೆ 518.44 ಮೀ ಗೆ ಕಡಿಮೆ ಮಾಡಲಾಗಿದೆ.
ಸದ್ಯಕ್ಕೆ ಹೊರಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 2.5 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದು, ಇದು ಈ ವರ್ಷದ ಗರಿಷ್ಠ ಹೊರಹರಿವು.
ಗುರುವಾರ ಜಲಾಶಯ ಮಟ್ಟ ಇನ್ನಷ್ಟು ಇಳಿಕೆಯಾಗಲಿದ್ದು, ಒಳಹರಿವು ಹೆಚ್ಚಳವಾದರೂ ಯಾವುದೇ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಅಲ್ಲಿನ ಕೊಯ್ನಾ 27 ಸೆಂ.ಮೀ, ಮಹಾಬಲೇಶ್ವರದಲ್ಲಿ 30.8 ಸೆಂ.ಮೀ, ನವಜಾದಲ್ಲಿ 38.7 ಸೆಂ.ಮೀ, ರಾಧಾನಗರಿಯಲ್ಲಿ 17.3 ಸೆಂ.ಮೀ, ಧೋಮದಲ್ಲಿ 19.7 ಸೆಂ.ಮೀ ಮಳೆಯಾಗಿದೆ. ಆದರೆ, ಬುಧವಾರ ಸಂಜೆಯ ವೇಳೆಗೆ ಮಳೆಯ ಅಬ್ಬರ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಯ್ನಾ ಜಲಾಶಯದಿಂದ 95,300 ಕ್ಯೂಸೆಕ್, ಕನ್ಹೇರ್ ದಿಂದ 10,468 ಕ್ಯೂಸೆಕ್, ವಾರಣಾದಿಂದ 34,257 ಕ್ಯೂಸೆಕ್ ನೀರು ಸೇರಿ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಒಟ್ಟಾರೆ 1,41,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಯಿಂದ 62,244 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ಅದರ ಜತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಥಳೀಯವಾಗಿ ಸುರಿಯುತ್ತಿರುವ ಮಳೆಯೂ ನದಿಗೆ ಬಂದು ಸೇರುತ್ತಿದೆ. ಹೀಗಾಗಿ ಇನ್ನೂ ಮೂರ್ನಾಲ್ಕು ದಿನ ಜಲಾಶಯದ ಒಳಹರಿವು ಏರಿಕೆಯಲ್ಲಿಯೇ ಇರಲಿದೆ ಎಂದು ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.
ನದಿ ತೀರದಲ್ಲಿ ಆತಂಕ ಸ್ಥಿತಿ:
ಆಲಮಟ್ಟಿ ಜಲಾಶಯದಲ್ಲಿ 2.5 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಕಾರಣ ಜಲಾಶಯದ ಮುಂಭಾಗದ ಅರಳದಿನ್ನಿ, ಯಲಗೂರು, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮದ ಹಲವಾರು ಜಮೀನುಗಳ ಅಂಚಿಗೆ ನೀರು ಬಂದಿದೆ. ಆದರೆ ನೀರು ಜಮೀನಿಗೆ ನುಗ್ಗಿಲ್ಲ. ಜಲಾಶಯದ ಹೊರಹರಿವು ಇನ್ನಷ್ಟು ಹೆಚ್ಚಿದರೇ, ತೀರದ ಜಮೀನುಗಳು ಜಲಾವೃತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಜಲಾಶಯದ ಮುಂಭಾಗದ ನಾರಾಯಣಪುರ ಜಲಾಶಯದಿಂದ 2.6 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ಪ್ರವಾಹ ಸ್ಥಿತಿಗತಿ ನಿಯಂತ್ರಣದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.