ಆಲಮಟ್ಟಿ: ಆ ಪ್ರದೇಶವನ್ನೊಮ್ಮೆ ದೂರದಿಂದ ನೋಡಿದರೆ ಹಸಿರು ಹೊದಿಕೆ ಭೂಮಿಗೆ ಸೀರೆ ಉಡಿಸಿದ್ದಾರೆನೋ? ಎಂಬ ಭಾವನೆ, ಅದರ ಮೇಲೆ ಕಾಲಿಟ್ಟರೇ, ಏನೋ ಮೈಪುಳಕದ ಅನುಭವ, ಬೆಳಗಿನ ಜಾವವಂತೂ ಸೂರ್ಯರಶ್ಮಿ ಇಡೀ ಹಸಿರು ಹೊದಿಕೆಯ ಅಂದ ಇನ್ನಷ್ಟು ಹೆಚ್ಚಿಸುತ್ತದೆ.
ಹೌದು, ಇದು ಪ್ರವಾಸಿಗಳ ಪಾಲಿನ ಸ್ವರ್ಗ ಆಲಮಟ್ಟಿಯ ಹೆಲಿಪ್ಯಾಡ್ ಅಕ್ಕಪಕ್ಕ ಸುಮಾರು ಐದು ಎಕರೆ ವಿಸ್ತಾರದಲ್ಲಿ ನಿರ್ಮಿಸಿದ ಹುಲ್ಲಿನ ಸುಂದರ ಉದ್ಯಾನದ ಬಣ್ಣನೆ.
ಆಲಮಟ್ಟಿಗೆ ಮೊದಲೆಲ್ಲ ಸಚಿವರು, ಮುಖ್ಯಮಂತ್ರಿ ಸೇರಿ ಗಣ್ಯರು ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸುವುದು ಸಾಮಾನ್ಯ, ಅದಕ್ಕಾಗಿ 1970 ರಿಂದಲೂ ಇಲ್ಲಿ ಹೆಲಿಪ್ಯಾಡ್ ಇದೆ.
ಕಳೆದ ಕೆಲ ವರ್ಷಗಳಿಂದ ಹೆಲಿಪ್ಯಾಡ್ ಹೊಸದಾಗಿ ನಿರ್ಮಿಸಿದರೂ ಅದರ ಅಕ್ಕಪಕ್ಕ ಮಾತ್ರ ಗಲೀಜು, ಯಾರೋ ಹೆಲಿಕ್ಯಾಪ್ಟರ್‌ನಲ್ಲಿ ಬರುತ್ತಾರೆಂದರೆ ಅದನ್ನು ಸ್ವಚ್ಛಗೊಳಿಸುವುದೇ ಒಂದು ಕಾಯಕ. ಅದಕ್ಕಾಗಿ ಇಡೀ ಐದು ಎಕರೆ ಪ್ರದೇಶದಲ್ಲಿ ಎರಡು ಹೆಲಿಪ್ಯಾಡ್ ಸ್ಥಳಗಳನ್ನು ಹೊರತುಪಡಿಸಿ ಇಡೀ ಪ್ರದೇಶದಲ್ಲಿ ಹುಲ್ಲು ಹಾಸಿನ ಉದ್ಯಾನ ನಿರ್ಮಿಸಲಾಗಿದೆ. ವಿವಿಧ ಉದ್ಯಾನಗಳ ಮಧ್ಯೆದಲ್ಲಿದ್ದು, ಇದು ಆಲಮಟ್ಟಿಯ ಸುಂದರತೆ ಇನ್ನೂ ಹೆಚ್ಚಿಸಿದೆ.
ಮೆಕ್ಸಿಕನ್, ಕೋರಿಯನ್, ಬರ್ಮುಡಾ, ಬಫೆಲಾ ಗ್ರಾಸ್ ಎಂಬ ಐದು ಬಗೆಯ ಹುಲ್ಲನ್ನು ಇಡೀ ಐದು ಎಕರೆ ಪ್ರದೇಶದಲ್ಲಿ ಬೆಳೆಸಲಾಗಿದೆ. ಅದರ ಅಂದವನ್ನು ಇನ್ನಷ್ಟು ಹೆಚ್ಚಿಸಲು, ಉದ್ಯಾನದ ದಂಡೆಯಲ್ಲಿ ಫೋನೋಕಾರ್ಪಸ್, ಸ್ಕುಮೇರಿಯಾ, ಮುಸಂಡಾ, ಇಂಜೂರಾ, ರೆಡ್ ಜಿಂಜರ್, ಬರ್ಡ್ ಆಫ್ ಪೆರಡೈಸ್, ಕೆಲಿಫೋನಿಯಾ, ಲಂಟಾನಾ, ಚಾಕಲೇಟ್ ಗ್ರಾಸ್, ಯರಂತೆಲಂ ಮೊದಲಾದ ಚಿಕ್ಕ ಚಿಕ್ಕ ಅಲಂಕಾರಿಕ ಸಸ್ಯಗಳನ್ನು ಹಚ್ಚಲಾಗಿದೆ ಎಂದು ಎಆರ್‌ಎಫ್‌ಒ ಸತೀಶ ಗಲಗಲಿ ತಿಳಿಸಿದರು.
ಆಲಮಟ್ಟಿಯ ವಿವಿಧ ಉದ್ಯಾನಗಳ ಸೌಂದರ್ಯ ಹೆಚ್ಚಿಸಿರುವ ಹುಲ್ಲಿಗೆ ಭಾರಿ ಬೇಡಿಕೆಯಿದೆ, ಹೀಗಾಗಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಅನುಮತಿ ನೀಡಿದರೆ, ಪ್ರವಾಸಿಗರಿಗೆ ಹುಲ್ಲನ್ನು ವಾಣಿಜ್ಯ ದೃಷ್ಟಿಯಿಂದ ಮಾರುವ ಉದ್ದೇಶ ಹೊಂದಲಾಗಿದೆ, ಒಂದು ಚದುರ ಅಡಿ ಹುಲ್ಲನ್ನು ಕತ್ತರಿಸುವ ಯಂತ್ರವೂ ಇದೆ ಎಂದು ಆರ್‌ಎಫ್‌ಒ ಮಹೇಶ ಪಾಟೀಲ ತಿಳಿಸಿದರು. ಹುಲ್ಲನ್ನು ಕತ್ತರಿಸಿದರೂ, ಅದಕ್ಕೆ ಸ್ವಲ್ಪ ಮಣ್ಣು ಹಾಕಿದರೇ, ಅದು ಮತ್ತೇ ಬೆಳೆಯುತ್ತದೆ ಎಂದರು.
ಆಲಮಟ್ಟಿಯ ಹೆಲಿಪ್ಯಾಡ್‌ನ ಸೌಂದರ್ಯ ಈ ಹುಲ್ಲು ಹಾಸು ಇಮ್ಮಡಿಗೊಳಿಸಿದೆ ನಮ್ಮ ನಿರೀಕ್ಷೆಗೆ ತಕ್ಕಂತೆ ಹುಲ್ಲುಹಾಸು ಬೆಳೆದಿದೆರಾಜಣ್ಣ ನಾಗಶೆಟ್ಟಿ ಡಿಎಫ್‌ಒ ಆಲಮಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.