ಮುದ್ದೇಬಿಹಾಳ: ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಪಕ್ಕದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಅವ್ಯವಸ್ಥೆಯ ಆಗರವಾಗಿದೆ.
ಸಾರ್ವಜನಿಕ ಸಭೆ, ಸಮಾರಂಭಗಳನ್ನು ಆಯೋಜಿಸುವುದಕ್ಕೆ ಹೇಳಿ ಮಾಡಿಸಿದಂತ ಜಾಗೆಯಲ್ಲಿರುವ ಈ ಭವನದಲ್ಲಿ ಪುರಸಭೆಯಿಂದ ಸೌಲಭ್ಯ ಒದಗಿಸುವುದಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಭವನ ನಿರ್ಮಾಣ ಮಾಡುವಾಗಲೇ ಶಬ್ದದ ಪ್ರತಿಧ್ವನಿಸುತ್ತಿರುವ ಸಮಸ್ಯೆ ಗಮನಕ್ಕೆ ತಂದರೂ ಭವನ ನಿರ್ಮಾಣ ಮಾಡಿದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಯ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೇ, ಭವನವನ್ನು ಪುರಸಭೆಯವರಿಗೆ ಹಾಗೆಯೇ ಹಸ್ತಾಂತರಿಸಿದ್ದಾರೆ. ಇದೀಗ ಯಾವುದೇ ಕಾರ್ಯಕ್ರಮ ನಡೆದರೂ ಸ್ಪಷ್ಟವಾಗಿ ಭಾಷಣ ಮಾಡುವವರ ಧ್ವನಿ ಸಭಿಕರು ಗ್ರಹಿಸುವುದೇ ಕಷ್ಟ ಎನ್ನುವಂತಾಗಿದೆ. ಇದರಿಂದಾಗಿ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟಕರ ಎನ್ನುವಂತಾಗಿದೆ.
ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ಸಾರ್ವಜನಿಕ ಸಭೆ ಸಮಾರಂಭ ಆಯೋಜಿಸುವುದಕ್ಕೆ ಸಂಘ,ಸಂಸ್ಥೆಯವರು, ಸ್ವತಃ ಸರ್ಕಾರದ ಇಲಾಖೆಯ ಅಧಿಕಾರಿಗಳೇ ಹಿಂದೇಟು ಹಾಕುವಂತಾಗುತ್ತಿದೆ.
ಕಲೆಗಳದ್ದೇ ಕಾರುಬಾರು:
ಸಭಾಭವನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನ ಅದನ್ನು ಬಾಡಿಗೆ ಹಿಡಿದವರಿಗೆ ಹಾಗೂ ಕೊಟ್ಟವರಿಗೆ ಇದ್ದಂತಿಲ್ಲ ಎಂಬುದು ನೋಡಿದರೆ ತಿಳಿಯುತ್ತದೆ.
ಬಾಡಿಗೆ ಹಿಡಿದವರಿಗೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂಬ ಸೂಚನೆಗಳನ್ನು ಇಲಾಖೆಯವರು ನೀಡಿದ್ದರೆ ಕಠಿಣ ನಿಯಮಗಳನ್ನು ರೂಪಿಸಿದರೆ ಭವನ ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿರುತ್ತಿರಲಿಲ್ಲ ಎಂಬುದು ದಲಿತಪರ ಸಂಘಟನೆಗಳ ಆರೋಪ.
ಭವನದ ಮುಖ್ಯವೇದಿಕೆಯ ಎಡ, ಬಲ ಮೂಲೆಯಲ್ಲಿ ಗುಟ್ಕಾ ತಿಂದು ಉಗುಳಿರುವ ಕಲೆಗಳು ಭವನದ ಅಂದವನ್ನು ಹಾಳು ಮಾಡಿವೆ. ಕೆಲವೆಡೆ ಗಾಜುಗಳು ಒಡೆದಿದ್ದು ಲೈಟುಗಳು ಒಡೆದಿವೆ.
ಶೌಚಗೃಹದ ಅವ್ಯವಸ್ಥೆ:
ಅಂಬೇಡ್ಕರ್ ಸಭಾಂಗಣದಲ್ಲಿ ಶೌಚಗೃಹಕ್ಕೆ ಹೋಗಬೇಕೆಂದರೆ ಮೂಗು ಕಣ್ಣು ಮುಚ್ಚಿಕೊಂಡೇ ಹೋಗಬೇಕು. ಶೌಚಾಲಯದಲ್ಲಿನ ಸಾಮಗ್ರಿಗಳು ಒಡೆದಿದ್ದು ಕೆಲವಡೆ ನೀರು ಬರುತ್ತದೆ ಇನ್ನು ಕೆಲವಡೆ ನೀರು ಬರುವುದೇ ಇಲ್ಲ.
ಬಾಡಿಗೆ ಹಿಡಿದವರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಭವನದ ಹೊರಗಡೆ ಅಡುಗೆ ಮಾಡಿ ಉಳಿಯುವ ಕಸ, ತ್ಯಾಜ್ಯ ಕೈ ತೊಳೆದ ನೀರು ಭವನದ ಪಕ್ಕದಲ್ಲಿ ನಿಂತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೂತು ಪಾಠ ಕೇಳದಷ್ಟು ಗಬ್ಬು ವಾಸನೆ ಬೀರುತ್ತದೆ. ಇದಕ್ಕೆಲ್ಲ ಅಧಿಕಾರಿಗಳು ಮುಕ್ತಿ ಹಾಡಬೇಕಿದೆ.
ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ ಬಡ ಮಧ್ಯಮ ವರ್ಗದವರಿಗೆ ಕಾರ್ಯಕ್ರಮ ಮದುವೆ ಸಭೆ ಸಮಾರಂಭ ಮಾಡಲು ಅನುಕೂಲವಾಗಿದೆ. ಆದರೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಪುರಸಭೆಯವರು ಮಾಡಬೇಕು.- ಲಕ್ಷ್ಮಣ ವಾಲಿಕಾರ, ವಾಲ್ಮೀಕಿ ಸಮಾಜದ ಮುಖಂಡ
ಅಂಬೇಡ್ಕರ್ ಸಭಾಭವನದಲ್ಲಿ ಪ್ರತಿಧ್ವನಿಸುವ ಸಮಸ್ಯೆಗೆ ತಜ್ಞರನ್ನು ಸಂಪರ್ಕಿಸಿದ್ದೇವೆ. ಮೂಲಸೌಕರ್ಯ ಸುಧಾರಣೆಗೆ ಆದ್ಯತೆ ನೀಡಲಾಗುವುದು.- ಮಲ್ಲನಗೌಡ ಬಿರಾದಾರ, ಮುಖ್ಯಾಧಿಕಾರಿ ಪುರಸಭೆ
ಅಂಬೇಡ್ಕರ್ ಸಭಾಭವನ ಸ್ವಚ್ಛತೆಯಿಂದ ಇಲ್ಲ ಎಂಬುದು ನನ್ನ ಗಮನಕ್ಕೂ ಬಂದಿದೆ. ಮೂಲಸೌಕರ್ಯ ಕಲ್ಪಿಸಲಾಗುವುದು. ಖಾಸಗಿಯವರಿಗೆ ನಿರ್ವಹಣೆಯ ಜವಾಬ್ದಾರಿ ನೀಡಿ ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು.- ಮಹೆಬೂಬ ಗೊಳಸಂಗಿ ಪುರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.