ಸಿಂದಗಿ: ‘ಪಟ್ಟಣದಲ್ಲಿ 8-10 ಸಾವಿರ ಜನಸಂಖ್ಯೆ ಹೊಂದಿದ ತಳವಾರ ಸಮುದಾಯಕ್ಕೆ ಒಂದು ಕಲ್ಯಾಣಮಂಟಪವಿಲ್ಲ. ಹೀಗಾಗಿ ಹೈಟೆಕ್ ಕಲ್ಯಾಣಮಂಟಪ ನಿರ್ಮಾಣಕ್ಕಾಗಿ ಮತಕ್ಷೇತ್ರದ ಶಾಸಕರು ₹5 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ತಳವಾರ ಮಹಾಸಭಾ ಸಂಘ ನಗರ ಘಟಕದ ಅಧ್ಯಕ್ಷ ಪ್ರಶಾಂತ ಕದ್ದರಕಿ ಮನವಿ ಮಾಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರು ತಳವಾರ ಕಲ್ಯಾಣಮಂಟಪಕ್ಕಾಗಿ ಸರ್ಕಾರದಿಂದ 20 ಗುಂಟೆ ಜಮೀನು ಮಂಜೂರು ಮಾಡಿಸಿದ್ದಾರೆ. ಇದಕ್ಕಾಗಿ ಹಿಂದುಳಿದ ವರ್ಗದ ಅನುದಾನದಲ್ಲಿ ₹2 ಕೋಟಿ ಬಿಡುಗಡೆ ಮಾಡುವ ಭರವಸೆಯೂ ನೀಡಿದ್ದಾರೆ. ಇದಕ್ಕೂ ಮೊದಲು ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ವೈಯಕ್ತಿಕ ₹31 ಲಕ್ಷದಲ್ಲಿ 11 ಗುಂಟೆ ಜಮೀನು ತಳವಾರ ಸಮಾಜದ ಸಮುದಾಯಕ್ಕಾಗಿ ಖರೀದಿಸಿ ಕೊಟ್ಟಿದ್ದಾರೆ. ಮೋರಟಗಿ ನಾಕಾ ಬಳಿ ಸ.ನಂ 281/5 ಈ ಜಾಗೆ ಉತಾರಿಯಲ್ಲಿ ಕೂಡ ಸಂಘದ ಹೆಸರು ಸೇರ್ಪಡೆಯಾಗಿದೆ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮುದಾಯ ಭವನಕ್ಕಾಗಿ ₹2 ಕೋಟಿ ಅನುದಾನ ಕೂಡ ಮಂಜೂರು ಮಾಡಿಸಿದ್ದರು. ಆದರೆ ಅದು ಬಿಡುಗಡೆಗೊಳ್ಳಲಿಲ್ಲ’ ಎಂದು ತಿಳಿಸಿದರು.
ಈ ಭವನಕ್ಕೂ ಶಾಸಕರು ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಕೇಳಿಕೊಂಡರು.
ತಳವಾರ ಮಹಾಸಭಾ ಸಂಘದ ಕಾರ್ಯದರ್ಶಿ ಪೀರೂ ಕೆರೂರ, ಸಂಘದ ತಾಲ್ಲೂಕು ಶಾಖೆಯ ಅಧ್ಯಕ್ಷ ಈರಣ್ಣ ಕುರಿ, ಜಿಲ್ಲಾ ಘಟಕದ ನಿರ್ದೇಶಕ ವಿಠ್ಠಲ ಯರಗಲ್ಲ, ಬಸವರಾಜ ರಂಜಣಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.