ADVERTISEMENT

ಗುಡ್ಡಾಪುರ | ನೊಂದವರ ಪಾಲಿನ ದಾನಮ್ಮದೇವಿ

12ನೇ ಶತಮಾನದಲ್ಲಿ ಧರ್ಮ ಜಾಗೃತಿಗಾಗಿ ಸಂಚಾರ; ಗುಡ್ಡಾಪುರದಲ್ಲಿ ನೆಲೆ

ಕೆ.ಎಸ್.ಈಸರಗೊಂಡ
Published 1 ಡಿಸೆಂಬರ್ 2024, 5:08 IST
Last Updated 1 ಡಿಸೆಂಬರ್ 2024, 5:08 IST
<div class="paragraphs"><p>ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸುಕ್ಷೇತ್ರ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನದ ನೋಟ</p></div>

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸುಕ್ಷೇತ್ರ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನದ ನೋಟ

   

ಗುಡ್ಡಾಪುರ(ಮಹಾರಾಷ್ಟ್ರ): ನಿಸರ್ಗ ರಮಣೀಯ ಗುಡ್ಡಾಪುರ ದಾನಮ್ಮದೇವಿ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರ, ಕ್ಷೇತ್ರದಲ್ಲಿ ನೆಲೆಸಿರುವ ದಾನಮ್ಮದೇವಿ ನಂಬಿದವರ ಇಷ್ಟಾರ್ಥ ಈಡೇರಿಸುತ್ತ ಭಕ್ತರ ಪಾಲಿನ ಭಾಗ್ಯದೇವಿ ಎನಿಸಿದ್ದಾಳೆ.

ಶಿವಯೋಗ ಸಾಧನೆ, ದಾಸೋಹ, ಕಾಯಕ ನಿಷ್ಠೆ, ಸತ್ಯ, ಧರ್ಮ, ನ್ಯಾಯ ಮೊದಲಾದ ಅಷ್ಟ ಗುಣಗಳನ್ನು ಅಳವಡಿಸಿಕೊಂಡ ದಾನಮ್ಮದೇವಿ ನುಡಿದದ್ದೆಲ್ಲ ಶಿವತತ್ತ್ವವಾಯಿತು, ನಡೆದದ್ದೆಲ್ಲ ಶಿವಪಥವಾಯಿತು.

ADVERTISEMENT

ಭಕ್ತರ ಉದ್ದಾರಕ್ಕಾಗಿ ದಾನಮ್ಮ ದೇವಿ ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ನೆಲೆಸಿದ್ದರೂ ದೇವಿಯ ಹೆಚ್ಚು ಭಕ್ತರು ಕನ್ನಡಿಗರೇ ಆಗಿದ್ದಾರೆ. ಉಮರಾಣಿ ಗ್ರಾಮದ ಅನಂತರಾಯ ಹಾಗೂ ಶಿರಸಮ್ಮನವರ ಪುತ್ರಿಯಾಗಿ ಜನಿಸಿದ ದೇವಿ ಸಂಗಮೇಶ ಗುರುಗಳಿಂದ ಲಿಂಗಮ್ಮ ಎಂಬ ಹೆಸರನ್ನು ಪಡೆದಳು.

ಶಿವಶರಣರ ಸತ್ಸಂಗ ಬಯಸಿ ಕಲ್ಯಾಣಕ್ಕೆ ಹೋಗಿ ಅಲ್ಲಿ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ ಪಡೆದು ದೃಷ್ಟಿಯೋಗದಲ್ಲಿ ಸಿದ್ದಿ ಹೊಂದಿದಳು. ಸಿದ್ಧರಾಮರ ಸಮಾಜ ಸೇವೆ ಕಂಡು ಪ್ರಭಾವಿತಳಾದ ಲಿಂಗಮ್ಮಳ ದಾನ ಮಾಡುವ ಗುಣ ಕಂಡು ಬಸವಣ್ಣನವರು ದಾನಮ್ಮದೇವಿ ಎಂದು ಕರೆದು ನಿನ್ನಿಂದ ಲೋಕ ಕಲ್ಯಾಣವಾಗಲೆಂದು ಹರಸಿದರು. ನಂತರ ಸಂಖ ಗ್ರಾಮಕ್ಕೆ ಬಂದು ಶರಣ ಸೋಮನಾಥನೊಂದಿಗೆ ಮದುವೆಯಾಗಿ ಕರುಣಸಿಂಧು, ಪತಧಾನ್ಯ, ಶಕ್ತಿದೇವಿ, ಯುಗಂತ ಅವತಾರೆ, ಶ್ರೀಶಕ್ತಿ, ದೈವಶಕ್ತಿ ಹೀಗೆ ಹಲವು ಹೆಸರು ಪಡೆದಳು.

12ನೇ ಶತಮಾನದಲ್ಲಿ ಧರ್ಮ ಜಾಗೃತಿಗಾಗಿ ದೇಶ ಸಂಚಾರ ಮಾಡುತ್ತ ಲೋಕಕಲ್ಯಾಣ ಪರಮಾರ್ಥದ ಹಾದಿ ಹಿಡಿದು ಗುಡ್ಡಾಪುರದಲ್ಲಿ ಬಂದು ನೆಲೆಸಿದ ದೇವಿ ಭಕ್ತಿಯಿಂದ ಪ್ರಾರ್ಥಿಸಿದವರಿಗೆ ‘ಇಷ್ಟಾರ್ಥ’ ಕರುಣಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಬಡವ ಬಲ್ಲಿದ ಎನ್ನದೆ ಎಲ್ಲ ವರ್ಗದ ಜನ ಇಲ್ಲಿಗೆ ಆಗಮಿಸಿ ಭಕ್ತಿ ಸೇವೆ ಸಮರ್ಪಿಸುವುದರಿಂದ ದೇವಿ, ನೊಂದವರ ಮನೆಮಾತಾಗಿದ್ದಾಳೆ. ನೊಂದವರ ನಂದಾದೀಪ ಎಂದೇ ಮನೆ ಮಾತಾಗಿದ್ದಾಳೆ.

ಗುಡ್ಡಾಪುರ ದಾನಮ್ಮ ದೇವಿ
ಗುಡ್ಡಾಪುರ ದಾನಮ್ಮ ದೇವಿ ದರ್ಶನಕ್ಕೆ ತಂಡೋಪ ತಂಡವಾಗಿ ಸಾಗುತ್ತಿರುವ ಪಾದಯಾತ್ರಿಕರು

ಛಟ್ಟಿ ಅಮಾವಾಸ್ಯೆ ಜಾತ್ರೆ

ಛಟ್ಟಿ ಅಮಾವಾಸ್ಯೆಯಂದು ಮತ್ತು ಡಿ.1ಮತ್ತು2 ರಂದು ಇಲ್ಲಿ ನಡೆಯುವ ಜಾತ್ರೆಗೆ ಕರ್ನಾಟಕ ಮಹಾರಾಷ್ಟ್ರ ಆಂಧ್ರ ಗೋವಾ ಸೇರಿದಂತೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಅದಕ್ಕಿಂತ ಮುಂಚೆ ಯುವಕ ಯುವತಿಯರು ವೃದ್ಧರು ಸೇರಿದಂತೆ ಸಾವಿರಾರು ಜನ ಪಾದಯಾತ್ರೆ ಮೂಲಕ ಗುಡ್ಡಾಪೂರ ದಾನಮ್ಮದೇವಿಯ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಅನ್ನಪ್ರಸಾದ-ಮೂಲಸೌಕರ್ಯ ವ್ಯವಸ್ಥೆ: ಭಕ್ತರ ಅನುಕೂಲಕ್ಕಾಗಿ ದಾನಮ್ಮದೇವಿ ಕಮಿಟಿಯವರು ಪ್ರತಿವರ್ಷ ಬಸ್ ಸೌಕರ್ಯ ಅನ್ನದಾಸೋಹ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಮೂಲ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.