ADVERTISEMENT

ಅಂಗವಿಕಲರ ಪಾಲಿನ ಆಶಾ ಕಿರಣ

ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ತಲುಪಿಸುತ್ತಿರುವ ಅಂಗವಿಕಲರ ಕಲ್ಯಾಣ ಇಲಾಖೆ

ಬಸವರಾಜ ಸಂಪಳ್ಳಿ
Published 2 ಡಿಸೆಂಬರ್ 2020, 11:23 IST
Last Updated 2 ಡಿಸೆಂಬರ್ 2020, 11:23 IST
ವಿ.ಜಿ.ಉಪಾಧ್ಯೆ
ವಿ.ಜಿ.ಉಪಾಧ್ಯೆ   

ವಿಜಯಪುರ: ಅಂಗವಿಕಲರ ಏಳಿಗೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಜಿಲ್ಲೆಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಂಗವಿಕಲರ ಪಾಲಿನ ಆಶಾ ಕಿರಣವಾಗಿ ಕೆಲಸ ಮಾಡುತ್ತಿದೆ.

ಜಿಲ್ಲೆಯಲ್ಲಿ 24,038 ಪುರುಷ ಮತ್ತು 19,495 ಮಹಿಳಾ ಅಂಗವಿಕಲರು ಸೇರಿದಂತೆ 43,533 ದೈಹಿಕ, ಮಾನಸಿಕ, ಬುದ್ದಿಮಾಂದ್ಯ, ಶ್ರವಣದೋಷ, ದೃಷ್ಟಿದೋಷ ಸೇರಿದಂತೆ ವಿವಿಧ ಬಗೆಯ ಅಂಗವಿಕಲರು ಇದ್ದಾರೆ ಎಂದುಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ವಿ.ಜಿ. ಉಪಾಧ್ಯೆ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಅಂಗವಿಕಲರ ಮರು ಸಮೀಕ್ಷೆ ಕೈಗೊಳ್ಳಲಾಗಿದೆ. ಈಗಾಗಲೇ ಶೇ 70ರಷ್ಟು ಸರ್ವೆ ಕಾರ್ಯ ಮುಗಿದದ್ದು, ಇನ್ನುಳಿದ ಶೇ 30ರಷ್ಟು ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ADVERTISEMENT

ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ಟಾಕಿಂಗ್‌ ಲ್ಯಾಪ್‌ಟಾಪ್‌:

ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟು ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಅಂಧರಿಗೆ ಟಾಕಿಂಗ್‌ ಲ್ಯಾಪ್‌ಟಾಪ್‌ ನೀಡುವ ಯೋಜನೆಯಡಿ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಜನ ಫಲಾನುಭವಿಗಳಿಗೆಟಾಕಿಂಗ್‌ ಲ್ಯಾಪ್‌ಟಾಪ್‌ ವಿತರಿಸಲಾಗಿದೆ ಎಂದು ತಿಳಿಸಿದರು.

350 ಸ್ಕೂಟರ್‌ ವಿತರಣೆ:

ಶೇ 70ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ 350 ಅಂಗವಿಕಲರಿಗೆಪ್ರಸಕ್ತ ಸಾಲಿನಲ್ಲಿ ಸ್ಕೂಟರ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 2 ಸಾವಿರಕ್ಕೂ ಅಧಿಕ ಅಂಗವಿಕಲರಿಗೆ ಸ್ಕೂಟರ್‌ ನೀಡಲಾಗಿದೆ ಎಂದು ಹೇಳಿದರು.

ಯುಡಿಐಡಿ ಗುರುತಿನ ಚೀಟಿ:

ಜಿಲ್ಲೆಯಲ್ಲಿ ಇದುವರೆಗೆ 10,092 ಅಂಗವಿಕಲರಿಗೆ ಯಡಿಐಡಿ ವಿಶೇಷ ಗುರುತಿನ ಚೀಟಿ ವಿತರಣೆ ಮಾಡಲಾಗಿದ್ದು, ಇನ್ನೂ 8,375 ಅರ್ಜಿಗಳು ಬಾಕಿ ಇವೆ ಎಂದು ಹೇಳಿದರು.

ಯುಡಿಐಡಿ ಗುರುತಿನ ಚೀಟಿ ಮಾಡಿಸಿಕೊಳ್ಳದವರು ಆದಷ್ಟು ಶೀಘ್ರ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಸರ್ಕಾರದ ಸೌಲಭ್ಯ ಪಡೆಯಲು ಅನಾನುಕೂಲವಾಗಲಿದೆ ಎಂದು ತಿಳಿಸಿದರು.

ಮಾಸಿಕ ಫೋಷಣಾ ಭತ್ಯೆ:

ಜಿಲ್ಲೆಯಲ್ಲಿ 20,396 ಅಂಗವಿಕಲರು ₹ 600 ಮಾಸಿಕ ಪೋಷಣಾ ಭತ್ಯೆ ಹಾಗೂ 14,036 ಅಂಗವಿಕಲರು ₹1400 ಮಾಸಿಕ ಪೋಷಣಾ ಭತ್ಯೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಉಚಿತ ಬಸ್‌ ಪಾಸ್‌:

ಜಿಲ್ಲೆಯಲ್ಲಿ 32,640 ಜನ ಅಂಗವಿಕಲರಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿ ವೇತನ:

ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಜಿಲ್ಲೆಯ 1200 ಅಂಗವಿಕಲ ವಿದ್ಯಾರ್ಥಿಗಳಿಗೆ ₹ 25 ಲಕ್ಷ ವಿದ್ಯಾರ್ಥಿವೇತನ ನೀಡಲಾಗಿದೆ. ಅಲ್ಲದೇ, 62 ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

ಆಧಾರ್‌ ಯೋಜನೆ:

ನಿರುದ್ಯೋಗಿ ಅಂಗವಿಕಲರಿಗೆ ಗೂಡಂಗಡಿ ಹಾಕಿಕೊಳ್ಳಲು ₹15 ಸಾವಿರ ಸಹಾಯಧನ ಮತ್ತು ₹20 ಸಾವಿರ ಬ್ಯಾಂಕ್‌ ಸಾಲವನ್ನು ನೀಡಲಾಗುತ್ತಿದ್ದು, ಈ ವರ್ಷ ಈ ಮೊತ್ತ ₹ 50 ಸಾವಿರಕ್ಕೆ ಹೆಚ್ಚಳವಾಗಿದೆ. ಈಗಾಗಲೇ ಎಂಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಸಾಧನ ಸಲಕರಣೆ:

60 ಜನರಿಗೆ ವಾಕರ್‌, 50 ಜನರಿಗೆ ವಾಕಿಂಗ್‌ ಸ್ಟಿಕ್‌, 100 ಜನ ಅಂಗವಿಕಲರಿಗೆ ಗಾಲಿ ಕುರ್ಚಿ, 200 ಜನರಿಗೆ ಬಗಲಬಡಿಗೆ, 162 ಜನರಿಗೆ ಶ್ರವಣಸಾಧನ‌ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಂಗವಿಕಲ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ತಗಲುವ ಪ್ರಯಾಣ ಭತ್ಯೆ, ಕ್ರೀಡಾ ಸಲಕರಣೆಗಳ ಖರೀದಿಗೆ ಹಣ ಸೇರಿದಂತೆ ₹ 50 ಸಾವಿರದ ವರೆಗೆ ಭತ್ಯೆ ನೀಡಲಾಗುತ್ತಿದ್ದು, ಅಂಗವಿಕಲ ಕ್ರೀಡಾಪಟುಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಹಾಯವಾಣಿ:ಅಂಗವಿಕಲರ ಸಮಸ್ಯೆ ಹಾಗೂ ವ್ಯಾಜ್ಯಗಳನ್ನು ಬಗೆಹರಿಸಲು ಹಾಗೂ ಅಂಗವಿಕಲರಿಗೆ ಇರುವ ಯೋಜನೆಗನ್ನು ತಿಳಿಸುವ ಉದ್ದೇಶದಿಂದಜಿಲ್ಲಾ ಕಚೇರಿಯಲ್ಲಿ ಸಹಾಯವಾಣಿ ಇದ್ದು, ಸಂಪರ್ಕಿಸಬಹುದು ಎಂದು ಹೇಳಿದರು.

***

ಅಂಧ ಮಹಿಳೆಯರಿಗೆ ಶಿಶುಪಾಲನ ಭತ್ಯೆ

ಅಂಧ ಮಹಿಳೆಯರು ಮಗುವಿಗೆ ಜನ್ಮ ನೀಡಿದಾಗ ಆ ಮಗುವನ್ನು ಇತರೆ ಸಾಮಾನ್ಯ ತಾಯಂದಿರಂತೆ ಆರೈಕೆ ಮಾಡುವುದು ಕಷ್ಟವಾಗುತ್ತದೆ. ಇಂತಹ ಅಂಧ ಮಹಿಳೆಯರು ಹಾಗೂ ಅವರಿಗೆ ಜನಿಸುವ ಕನಿಷ್ಠ 2 ಮಕ್ಕಳ ಆರೈಕೆ ಮಾಡಲು ದಾದಿಯ ಸೇವೆ, ಆರೋಗ್ಯ ಪಾಲನೆ, ಪೌಷ್ಠಿಕ ಆಹಾರ ಔಷಧೋಪಚಾರಗಳಿಗಾಗಿ ಪ್ರತಿ ತಿಂಗಳು ₹ 2 ಸಾವಿರ ಶಿಶುಪಾಲನಾ ಭತ್ಯೆ ನೀಡಲಾಗುತ್ತದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಐದು ಫಲಾನುಭವಿಗಳಿಗೆ ನೀಡಲಾಗಿದೆ ವಿ.ಜಿ.ಉಪಾಧ್ಯೆ ತಿಳಿಸಿದರು.

ಶಸ್ತ್ರ ಚಿಕಿತ್ಸೆಗೆ ನೆರವು:

ಅಂಗವಿಕಲ ನಿವಾರಣಾ ಶಸ್ತ್ರಚಿಕಿತ್ಸೆಗೆ ₹ 1 ಲಕ್ಷದ ವರೆಗೆ ಚಿಕಿತ್ಸಾ ವೆಚ್ಚ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಸದ್ಯ ಐದು ಜನರು ಇದರ ಸದುಪಯೋಗ ಪಡೆದುಕೊಂಡಿದ್ದು, ಇನ್ನೂ ಐದು ಜನರಿಗೆ ನೀಡುವುದು ಬಾಕಿ ಇದೆ ಎಂದು ಹೇಳಿದರು.

***

ವಿವಾಹ ಪ್ರೋತ್ಸಾಹಧನ

ಅಂಗವಿಕಲರನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಗೆ ₹50 ಸಾವಿರ ಪ್ರೋತ್ಸಾಹಧನ ನೀಡುವ ಯೋಜನೆಯಡಿ ಜಿಲ್ಲೆಯಲ್ಲಿ 126 ಜನರಿಗೆ ವಿತರಿಸಲಾಗಿದೆ. ಇನ್ನೂ 70 ಜನರಿಗೆ ನೀಡುವುದು ಬಾಕಿ ಇದ್ದು, ಸರ್ಕಾರದಿಂದ ಅನುದಾನ ಬಂದ ಕೂಡಲೇ ವಿತರಿಸಲಾಗುವುದು ಎಂದು ವಿ.ಜಿ.ಉಪಾಧ್ಯೆ ತಿಳಿಸಿದರು.

ಜಿಲ್ಲೆಯಲ್ಲಿ ಅಂಗವಿಕಲ ವಿದ್ಯಾರ್ಥಿನಿಯರಿಗಾಗಿ 50 ಸೀಟುಗಳ ವಸತಿ ನಿಲಯವನ್ನು ಎನ್‌ಜಿಒ ಮೂಲಕ ನೆಡಸಲಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟವರಿಗೆ ಇಲ್ಲಿ ಪ್ರವೇಶವಿದೆ ಎಂದು ಹೇಳಿದರು.

ನಾಲ್ಕು ಅಂಧರ ಮತ್ತು ನಾಲ್ಕು ಶ್ರವಣದೋಷ ಇರುವವರಿಗಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಇವೆ. ಅಲ್ಲದೇ, ಬಿಎಲ್‌ಡಿಇ ಸಂಸ್ಥೆಯಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರವಿದೆ ಎಂದು ತಿಳಿಸಿದರು.

***

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅಂಗವಿಕಲರು ನೇರವಾಗಿ ಕಚೇರಿಯನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬಾರದು
ವಿ.ಜಿ.ಉಪಾಧ್ಯೆ
ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.