ADVERTISEMENT

ವಿಜಯಪುರ: ಕನಿಷ್ಠ ವೇತನಕ್ಕೆ ‘ಗುಲಾಬಿ ಸೀರೆ’ ಗುಡುಗು

ಎರಡು ದಿನ ಪೂರೈಸಿದ ಆಶಾ ಕಾರ್ಯಕರ್ತೆಯರ ಧರಣಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:37 IST
Last Updated 14 ಆಗಸ್ಟ್ 2025, 5:37 IST
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಧರಣಿಯನ್ನು ಉದ್ದೇಶಿಸಿ ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿದರು
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಧರಣಿಯನ್ನು ಉದ್ದೇಶಿಸಿ ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿದರು   

ವಿಜಯಪುರ: ಮಾಸಿಕ ಕನಿಷ್ಠ ₹10 ಸಾವಿರ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ನಡೆಸುತ್ತಿರುವ ಧರಣಿ ಬುಧವಾರ ಎರಡು ದಿನ ಪೂರೈಸಿತು.

‘ಗುಲಾಬಿ ಸೀರೆ ಗುಡುಗಿದರೆ ವಿಧಾನಸೌಧ ನಡುಗುವುದು’, ‘ಆಶಾ ಕಾರ್ಯಕರ್ತೆಯರ ಹೋರಾಟ ಚಿರಾಯುವಾಗಲಿ’,  ‘ಆಶಾಗಳೇ ಒಂದಾಗಿ’, ‘ಕನಿಷ್ಠ ವೇತನ ನಿಗದಿ ಮಾಡಿ’, ‘ಮುಖ್ಯಮಂತ್ರಿಗಳೇ ನುಡಿದಂತೆ ನಡೆಯಿರಿ’ ಎಂಬ ಘೋಷಣೆಗಳು ಮೊಳಗಿದವು.

ಧರಣಿ ಬೆಂಬಲಿಸಿ ಮಾತನಾಡಿದ ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ, ‘ಜನಪರ, ಮಹಿಳಾ ಪರ ಎಂದು ಹೇಳುವ ಸರ್ಕಾರಗಳು ಹೆಣ್ಣು ಮಕ್ಕಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಒಂದೇ ಒಂದು ಮನವಿ ಸ್ವೀಕರಿಸಲು ಬರುವಷ್ಟು ಸೌಜನ್ಯ ಇಲ್ಲ. ದುಬಾರಿ ಶಿಕ್ಷಣ, ಬೆಲೆ ಏರಿಕೆ ಸಂದರ್ಭದಲ್ಲಿ ಕಳೆದ ಎರಡರಿಂದ ಮೂರು ತಿಂಗಳಿನಿಂದ ಪ್ರೋತ್ಸಾಹಧನ ಕೂಡ ನೀಡಿಲ್ಲ’ ಎಂದು ಆರೋಪಿಸಿದರು.

ADVERTISEMENT

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಮುಖಂಡರಾದ ರಶ್ಮಿ ಗುತ್ತೆದಾರ ಮಾತನಾಡಿ, ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಾ ಅವರ ಹಕ್ಕುಗಳನ್ನು ಕೇಳುತ್ತಿದ್ದಾರೆ, ಅವರ ಹಕ್ಕು ಮತ್ತು ಬೇಡಿಕೆಗಳನ್ನು ಸರ್ಕಾರ ಈ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ವಿರೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಮಾಡಿರುವ ಕೆಲಸಗಳು ಆನ್‌ಲೈನ್‌ ಪೋರ್ಟಲ್‌ನಲ್ಲಿ ಎಂಟ್ರಿ ಆಗದೆ ಪ್ರತಿ ವರ್ಷ ಸಾವಿರಾರು ರೂಪಾಯಿಗಳು ನಷ್ಟವಾಗುತ್ತಿವೆ. ಅಂತೆಯೇ, ಆರ್ ಸಿ ಎಚ್ ಪೋರ್ಟಲ್ ರದ್ದುಗೊಳಿಸಿ, ಬಿಡಿಬಿಡಿಯಾಗಿ ಕೊಡುವ ಬದಲು ಎಲ್ಲಾ ಪ್ರೋತ್ಸಾಹಧನಗಳನ್ನು ಸೇರಿಸಿ ಒಟ್ಟಾಗಿ ನೀಡಬೇಕು ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ, ಚಪ್ಪಾಳೆ ಮತ್ತು ಹೂವಿನ ಸುರಿಮಳೆ, ಹೊಗಳಿಕೆ ಬೇಡ, ನಮ್ಮ ಜೀವನ ಮೇಲೆತ್ತಲು ಘನತೆಯಿಂಧ ಗೌರವದಿಂದ ಬದುಕಲು ಕನಿಷ್ಠ ₹ 15 ಸಾವಿರ ವೇತನ ನೀಡಬೇಕು, ಡಿ ದರ್ಜೆಯ ಕಾರ್ಮಿಕರೆಂದು ಪರಿಗಣಿಸಬೇಕು, ನಗರದ ಕೊಳಚೆ ಪ್ರದೇಶಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಪಿಎಫ್, ಇಎಸ್‍ಐ, ಗ್ರಾಚ್ಯುಟಿ ಇತ್ಯಾದಿ ಸಾಮಾಜಿಕ ಭದ್ರತೆಗಳನ್ನು ಖಚಿತಗೊಳಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘಟನೆ ಮುಖಂಡ ಅನಿಲ ಹೊಸಮನಿ, ದೇಶ ರಕ್ಷಕರ ಪಡೆ ಸಂಘದ ರಾಜ್ಯ ಸಂಚಾಲಕ ಆಕಾಶ ಇಂಡಿ, ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಎಐಎಂಎಸ್‍ಎಸ್ ಜಿಲ್ಲಾಧ್ಯಕ್ಷರಾದ ಗೀತಾ ಎಚ್, ಜಂಟಿ ಕಾರ್ಯದರ್ಶಿ ಶಿವರಂಜನಿ ಹಾಗೂ ಎಐಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯರಾದ ಮಹದೇವಿ ಧರ್ಮಶೆಟ್ಟಿ ಸೇರಿದಂತೆ ವಿವಿಧ ರೈತ, ಪ್ರಗತಿಪರ, ದಲಿತ ಸಂಘಟನೆಯ ಮುಖಂಡರು  ಧರಣಿಯಲ್ಲಿ ಭಾಗವಹಿಸಿ, ಬೆಂಬಲ ನೀಡಿದರು.

ಈ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಸಂಘಟನೆ ಪ್ರಮುಖರಾದ ಭಾರತಿ ದೇವಕತೆ, ಅಂಬಿಕಾ ವಳಸಂಗ, ಲೈಲಾ ಪಠಾಣ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ಭಾಗವಹಿಸಿದ್ದರು.

ಮನೆ ಮಕ್ಕಳು ಸಂಸಾರ ಜವಾಬ್ದಾರಿಗಳನ್ನು ಬದಿಗೊತ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಬಿಡಿಗಾಸಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾಗಳ ಧ್ವನಿಗೆ ಕಿವಿಕೊಡಬೇಕು 
-ಶಿವಬಾಳಮ್ಮ ಕೊಂಡಗೂಳಿ, ಜಿಲ್ಲಾ ಕಾರ್ಯದರ್ಶಿಎಐಎಂಎಸ್‍ಎಸ್ 
ಆಶಾಗಳನ್ನು ಕೇವಲ ಫ್ರಂಟ್‍ಲೈನ್ ವಾರಿಯರ್ಸ್‌ ಎಂದು ಕರೆದರೆ ಸಾಕಾಗುವುದಿಲ್ಲ ಅದರ ಬದಲು ಗೌರವ ಘನತೆಯಿಂದ ಬದುಕು ಕಟ್ಟಿಕೊಳ್ಳಲು ಬೇಕಾಗುವ ವೇತನ ನೀಡಬೇಕು 
- ಸಿದ್ದಲಿಂಗ ಬಾಗೇವಾಡಿ, ರಾಜ್ಯ ಕಾರ್ಯದರ್ಶಿಎಐಡಿವೈಓ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.