ಸಿಂದಗಿ: ‘ಪಟ್ಟಣದಲ್ಲಿ ಜಮೀನು ವಿವಾದ ಇದ್ದಲ್ಲಿ ಮನಗೂಳಿ ಮನೆತನದ ಕೈವಾಡ ಇದೆ ಎಂಬುದನ್ನು ಮಾಜಿ ಶಾಸಕ ರಮೇಶ ಭೂಸನೂರ ಸಾಬೀತುಪಡಿಸುವ ಒಂದೇ ಒಂದು ದಾಖಲೆ ಪತ್ರ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ. ಸಾಬೀತುಪಡಿಸಲು ಆಗದಿದ್ದರೆ ಅವರು ರಾಜಕೀಯವಾಗಿ ನಿವೃತ್ತರಾಗಬೇಕು’ ಎಂದು ಶಾಸಕ ಅಶೋಕ ಮನಗೂಳಿ ಸವಾಲು ಹಾಕಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಶಾಸಕ ಭೂಸನೂರರು ನಮ್ಮ ಮನಗೂಳಿ ಮನೆತನ, ಶಿಕ್ಷಣ ಸಂಸ್ಥೆ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವುದು ಸರಿಯಲ್ಲ. ನಿರಾಶ್ರಿತರ ಧರಣಿ ವೇದಿಕೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರೊಬ್ಬ ಹಿರಿಯ ರಾಜಕಾರಣಿ, ಮೂರು ಸಲ ಶಾಸಕರಾದವರು ಲಘುವಾದ ಪದಗಳ ಬಳಕೆ ಮಾಡಿರುವುದು ಶೋಭೆ ತರುವ ಮಾತುಗಳಲ್ಲ’ ಎಂದರು.
‘84 ಕುಟುಂಬಗಳ ಮನೆಗಳ ತೆರವು ಕಾರ್ಯದಲ್ಲಿ ಯಾರ ತಪ್ಪು, ಒಪ್ಪು ಬಗ್ಗೆ ಚರ್ಚಿಸುವುದು ಅಗತ್ಯವಿಲ್ಲ. ಕೋರ್ಟ್ ಆದೇಶಕ್ಕೆ ತಲೆಬಾಗಿ ಪುರಸಭೆ ತೆರುವುಗೊಳಿಸಿದೆ. 84 ಕುಟುಂಬಗಳಿಗೆ ನಿವೇಶನ ನೀಡುವುದು ಪುರಸಭೆ ಆಶ್ರಯ ಸಮಿತಿ ಕರ್ತವ್ಯ, ಅವರ ಕಣ್ಣೀರು ಒರೆಸುವ ಕಾಳಜಿ, ಕಳಕಳಿ ನನ್ನದಾಗಿದೆ. ನನ್ನ ಮೇಲೆ ಭರವಸೆ ಇಡಿ’ ಎಂದು ನಿರಾಶ್ರಿತ ಕುಟುಂಬಗಳಲ್ಲಿ ಮನವಿ ಮಾಡಿಕೊಂಡರು.
‘ಭೂಸನೂರು ಮಾಡಿದ ಆರೋಪಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಾಲಯ ಮಾಡಿರುವುದನ್ನು ಹೊರತುಪಡಿಸಿದರೆ ಉಳಿದ ಆರೋಪಗಳಲ್ಲಿ ಹುರುಳಿಲ್ಲ’ ಎಂದರು.
‘ಭೂಸನೂರು ಶಾಸಕರಿದ್ದ ಸಂದರ್ಭದಲ್ಲಿ ಪಟ್ಟಣದ ಜನಸಂಖ್ಯೆ 50 ಸಾವಿರ ದಾಟಿದ್ದರೂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಏಕೆ ಪ್ರಯತ್ನಿಸಲಿಲ್ಲ? ಇದೀಗ ನಾನು ಸಿಂದಗಿಯನ್ನು ನಗರಸಭೆ ಮಾಡಿರುವುದಕ್ಕೆ ಅಭಿಮಾನಿಗಳು, ಪಟ್ಟಣದ ನಿವಾಸಿಗಳು ಮೆರವಣಿಗೆ ಮಾಡಿದ್ದಾರೆ. ನನ್ನ ಮೆರವಣಿಗೆ ನಾನೇ ಮಾಡಿಕೊಂಡಿದ್ದಲ್ಲ’ ಎಂದರು.
ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ಮುಖ್ಯಾಧಿಕಾರಿ ರಾಜಶೇಖರ ಎಸ್., ಸರ್ಕಲ್ ಇನ್‌ಸ್ಪೆಕ್ಟರ್ ನಾನಾಗೌಡ ಪೊಲೀಸ್ ಪಾಟೀಲ, ಸಬ್ ಇನ್‌ಸ್ಪೆಕ್ಟರ್ ಆರೀಫ್ ಮುಶಾಪುರಿ ಇದ್ದರು.
ನಿರಾಶ್ರಿತರಿಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಮಾತನಾಡುವುದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆಅಶೋಕ ಮನಗೂಳಿ, ಶಾಸಕ
ಸುಪ್ರೀಂಕೋರ್ಟ್ ಆದೇಶದನ್ವ ಮನೆಗಳನ್ನು ತೆರುವುಗೊಳಿಸಲಾಗಿದೆ. ಶಾಸಕರ ನೇತೃತ್ವದ ಪುರಸಭೆ ಆಶ್ರಯ ಸಮಿತಿ ಸಭೆಯಲ್ಲಿ ನಿರಾಶ್ರಿತರಿಗೆ ಪರ್ಯಾಯ ನಿವೇಶನ ವ್ಯವಸ್ಥೆ ಮಾಡುವ ನಿರ್ಣಯ ಮಾಡಲಾಗಿದೆಅನುರಾಧಾ ವಸ್ತ್ರದ ಉಪವಿಭಾಗಾಧಿಕಾರಿ ಇಂಡಿ
84 ಕುಟುಂಬಗಳಿಗೆ ಸಹಾಯಧನ
ಸಿಂದಗಿ ಪುರಸಭೆಯ ಅಂತರಗಂಗಿ ಬಡಾವಣೆಯಲ್ಲಿ 84 ಕುಟುಂಬಗಳಿಗೆ ನಿವೇಶನ ನೀಡಲು ನಿರ್ಧರಿಸಲಾಗಿದ್ದು ಅಲ್ಲಿ ಮೂಲ ಸೌಲಭ್ಯ ಸಾರಿಗೆ ಸಂಪರ್ಕ ಒದಗಿಸಿಕೊಡಲಾಗುವುದು. ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಅನುದಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಈಗ ಅವರಿಗೆ ವಾಸಿಸಲು ತುರ್ತಾಗಿ ಸೂರು ಅಗತ್ಯವಾಗಿದ್ದರಿಂದ ಶೆಡ್ ಹಾಕಿಕೊಳ್ಳಲು ಎಂ.ಸಿ. ಮನಗೂಳಿ ಫೌಂಡೇಷನ್‌ನಿಂದ 84 ಕುಟುಂಬಗಳಿಗೆ ತಲಾ ₹25 ಸಾವಿರ ಸಹಾಯಧನ ನೀಡಲಾಗುವುದು ಎಂದು ಹೇಳಿದರು. ‘ಒಂದು ವೇಳೆ ಪಟ್ಟಣದ ಸಮೀಪ ಜಮೀನು ಖರೀದಿಸಲು ನಿವಾಸಿಗಳು ಮುಂದಾದರೆ ಒಂದು ಎಕರೆ ಜಮೀನಿಗೆ ತಗಲುವ ₹25 ರಿಂದ ₹30 ಲಕ್ಷವನ್ನು ವೈಯಕ್ತಿಕವಾಗಿ ನೀಡುತ್ತೇನೆ’ ಎಂದು ನಿರಾಶ್ರಿತರಿಗೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.