ADVERTISEMENT

ಫ್ಲೋರೋಸಿಸ್ ರೋಗ ನಿಯಂತ್ರಣಕ್ಕೆ ಜಾಗೃತಿ

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 15:44 IST
Last Updated 1 ಡಿಸೆಂಬರ್ 2020, 15:44 IST
ಗೋವಿಂದರೆಡ್ಡಿ
ಗೋವಿಂದರೆಡ್ಡಿ   

ವಿಜಯಪುರ: ಫ್ಲೋರೋಸಿಸ್ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದರು.

ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಫ್ಲೊರೋಸಿಸ್ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಈ ಕುರಿತು ವಿಶೇಷವಾಗಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ADVERTISEMENT

ಶಾಲೆ ಮತ್ತು ಅಂಗನವಾಡಿ ಮಕ್ಕಳಲ್ಲಿ ಜಾಗೃತಿ ಮೂಲಕ ಪಾಲಕರಲ್ಲಿಯೂ ಅರಿವು ಮೂಡಿಸುವಂತೆ ಅವರು ಸೂಚನೆ ನೀಡಿದರು.

ಮುದ್ದೇಬಿಹಾಳ ತಾಲ್ಲೂಕಿನ ಹೆಚ್ಚಿನ ಹಳ್ಳಿಗಳಲ್ಲಿ ಫ್ಲೋರೈಡ್ ಅಂಶವುಳ್ಳ ನೀರು ಹೆಚ್ಚಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಬಸವನ ಬಾಗೇವಾಡಿ, ಸಿಂದಗಿ, ಚಡಚಣ ಕೆಲವು ಭಾಗಗಳಲ್ಲಿ ಈ ಅಂಶ ಕಂಡು ಬಂದಿದೆ. ಜಿಲ್ಲೆಯಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಗ್ರಾಮಗಳ ಪಟ್ಟಿ ಮಾಡಿ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಒದಗಿಸುವಂತೆ ಆರೋಗ್ಯ ಇಲಾಖೆಯ ಫ್ಲೋರೋಸಿಸ್ ನಿಯಂತ್ರಣ ಸಲಹೆಗಾರರಿಗೆ ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ನೀರು ಬಳಸುವ ಬಗ್ಗೆ ಸೂಕ್ತ ಮನವರಿಕೆ ಮಾಡಿಸುವಂತೆ ಸಲಹೆ ನೀಡಿದರು.

ಫ್ಲೋರೈಡ್ ಅಂಶ ಪರೀಕ್ಷೆಗಾಗಿ ಗುರುತಿಸಿದ ಗ್ರಾಮಗಳ ನೀರಿನ ಮಾದರಿಯನ್ನು ಆಶಾಕಾರ್ಯಕರ್ತೆಯರ ಮೂಲಕ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಹುಣಸೆ ಸಸಿ ಬೆಳೆಸಲು ಪ್ರೋತ್ಸಾಹಿಸಬೇಕು. ಫ್ಲೋರೈಡ್ ಅಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು.

ಫ್ಲೋರೋಸಿಸ್ ರೋಗ ಹೆಚ್ಚಿರುವ ಕಡೆ ಜಾಗೃತಿ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ಜಲಧಾರೆ ಸಹಕಾರಿ:

ಜಿಲ್ಲೆಯ ಗ್ರಾಮ ಮತ್ತು ಪಟ್ಟಣಗಳಿಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ನೀರು ಪೂರೈಸುವ ಯೋಜನೆ ಮೂರ್ನಾಲ್ಕು ವರ್ಷದಲ್ಲಿ ಜಾರಿಗೊಳ್ಳುವ ಸಾಧ್ಯತೆಯಿದ್ದು, ಈ ಯೋಜನೆ ಜಾರಿಯಿಂದ ಕೊಳವೆ ನೀರಿನ ಬಳಕೆ ಪ್ರಮಾಣ ಕಡಿಮೆಯಾಗಿ ಫ್ಲೋರೋಸಿಸ್ ನಿಯಂತ್ರಣಕ್ಕೂ ಹಾಗೂ ಬರ ಪರಿಸ್ಥಿತಿ ನಿವಾರಣೆಗೂ ನೆರವಾಗಲಿದೆ ಎಂದು ಅವರು ಹೇಳಿದರು.

ವಿಜಯಪುರ, ರಾಯಚೂರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಜಾರಿಗೊಳ್ಳಲಿದೆ. ವಿಜಯಪುರ ಜಿಲ್ಲೆಯಲ್ಲಿ ಎರಡು ವಿಭಾಗಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದ್ದು, ನಾರಾಯಣಪುರ ಹಿನ್ನೀರಿನಿಂದ ಮುದ್ದೇಬಿಹಾಳ ಮತ್ತು ಸಿಂದಗಿ ತಾಲ್ಲೂಕುಗಳಿಗೆ ಹಾಗೂ ಆಲಮಟ್ಟಿಯಿಂದ ಇತರೆ ತಾಲ್ಲೂಕುಗಳಿಗೆ ಕುಡಿಯುವ ನೀರು ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಫ್ಲೋರೋಸಿಸ್ ನಿಯಂತ್ರಣ ಸಲಹೆಗಾರ ವಿಜಯ ಮಹಾಂತೇಶ ಅವರು ಫ್ಲೋರೋಸಿಸ್‍ದಿಂದ ಮಾನವನ ಎಲುಬು, ಹಲ್ಲು ಹಾಗೂ ಇತರೆ ಅಂಗಾಂಗಳ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಕುರಿತು ಸೂಕ್ತ ಮಾಹಿತಿ ನೀಡಿದರು.

* ಆಲಮಟ್ಟಿ, ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ಜಾಕ್‍ವೆಲ್‍ಗಳು ನಿರ್ಮಾಣಗೊಂಡು ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆಯು ಸಹ ಶೀಘ್ರ ನಿವಾರಣೆಯಾಗಲಿದೆ
- ಗೋವಿಂದ ರೆಡ್ಡಿ, ಸಿಇಒ, ಜಿಲ್ಲಾ ಪಂಚಾಯ್ತಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.