ADVERTISEMENT

ಬೆಂಗಳೂರಿನಲ್ಲಿ ಅಯ್ಯಪ್ಪ ಕೊಲೆ; ಮೊದ್ದೆಬಿಹಾಳದಲ್ಲಿ ಅಭಿಮಾನಿಗಳಿಗೆ ದಿಗ್ಭ್ರಮೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 6:26 IST
Last Updated 17 ಅಕ್ಟೋಬರ್ 2019, 6:26 IST
ಡಾ.ಅಯ್ಯಪ್ಪ ದೊರೆ
ಡಾ.ಅಯ್ಯಪ್ಪ ದೊರೆ   

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾಗಿರುವ ಡಾ.ಅಯ್ಯಪ್ಪ ರಾಮಣ್ಣ ದೊರೆ ತಾಲ್ಲೂಕಿನ ಸರೂರ ಗ್ರಾಮದವರು. ಅವರ ಸಾವು ಅವರ ಅಭಿಮಾನಿಗಳು, ಗಣ್ಯರ ದಿಗ್ಭ್ರಮೆಗೆ ಕಾರಣವಾಗಿದೆ.

ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರೂರ ಗ್ರಾಮದಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಬಾಗಲಕೋಟೆ ಜಿಲ್ಲೆಯ ಹಳ್ಳೂರ ಗ್ರಾಮದಲ್ಲಿ ಪೂರೈಸಿ, ಕಾಲೇಜು ಶಿಕ್ಷಣಕ್ಕೆ ಬೆಂಗಳೂರು ಸೇರಿ ಅಲ್ಲಿಯೇ ವಿದ್ಯಾರ್ಥಿ ನಾಯಕರಾಗಿ, ಹಂತ ಹಂತವಾಗಿ ಬೆಳೆದಿದ್ದರು. ಆಗ ರಾಜಕೀಯದಲ್ಲಿ ಯುವನಾಯಕರಾಗಿದ್ದ ಡಾ.ಜೀವರಾಜ ಆಳ್ವಾ ಅವರೊಂದಿಗೆ ಗುರುತಿಸಿಕೊಂಡಿದ್ದ ಅವರು, ರಾಜಶೇಖರಮೂರ್ತಿ, ಎಂ.ವಿ. ದೇವರಾಜ ಅವರ ಒಡನಾಡಿಗಳಾಗಿದ್ದರು.

53 ವರ್ಷದ ಅಯ್ಯಪ್ಪ ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರ ಸಮೇತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇಲ್ಲಿಯ ಗೆದ್ದಲಮರಿ ಬಳಿ ಇರುವ 12 ಎಕರೆ ಈಶ್ವರಿ ಫಾರ್ಮ್ ಹೌಸಿನಲ್ಲಿ ಅವರ ತಾಯಿ ವಾಸ ಮಾಡುತ್ತಿದ್ದರು. ಇವರ ಕಿರಿಯ ಸಹೋದರ ರೇವಣಸಿದ್ದ ದೊರೆ ಬೀದರ್‌ನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಇವರಿಗೆ ಐವರು ಸಹೋದರಿಯರು ಇದ್ದಾರೆ.

ADVERTISEMENT

2018ರಲ್ಲಿ ಜನಸಾಮಾನ್ಯರ ಪಕ್ಷ ಸ್ಥಾಪಿಸಿ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬೆಂಗಳೂರಿನ ಅಲೈಯನ್ಸ್ ವಿಶ್ವವಿದ್ಯಾಲಯದ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್, ಸೆನೆಟ್ ಸದಸ್ಯರಾಗಿ ಕೆಲಸ ಮಾಡಿದ್ದರು.

ಜನಸಾಮಾನ್ಯರ ಪಕ್ಷ ಸ್ಥಾಪಿಸಿದ ಮೇಲೆ ಕಳಸಾ ಬಂಡೂರಿ, ಮಹದಾಯಿ ಮತ್ತು ಕೃಷ್ಣಾ ಕಣಿವೆ ನೀರಾವರಿ ಯೋಜನೆಗಳ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

ಅಯ್ಯಪ್ಪ ಅವರ ಊರಿನವರೇ ಆಗಿರುವ ಆರೋಗ್ಯ ಕವಚ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀಶೈಲ ಹೂಗಾರ, ಆಪ್ತ ಸ್ನೇಹಿತ ಬಾಬು ಬಿರಾದಾರ ಅವರು ಅವರ ಜನಪರ ಕೆಲಸಗಳನ್ನು ಸ್ಮರಿಸಿದರು.

‘ಮುದ್ದೇಬಿಹಾಳದ ಕುಡಿಯುವ ನೀರಿನ ಹೋರಾಟದ ನಿಯೋಗವನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಅವರಿಗ ಭೇಟಿ ಮಾಡಿಸಿ, ತಾಲ್ಲೂಕಿಗೆ ಕುಡಿಯುವ ನೀರು ದೊರಕಿಸಿಕೊಟ್ಟಿದ್ದರು’ ಎಂದು ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನಂದಿಕೇಶ್ವರಮಠ, ಸಂಘಟನಾ ಸಂಚಾಲಕ ಡಿ.ಬಿ.ವಡವಡಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.