ADVERTISEMENT

ಬಾಬೂಜಿ ಬದುಕು, ಸಾಧನೆ ನಮ್ಮೆಲ್ಲರ ಬಾಳಿಗೆ ಬೆಳಕು: ದೇವಾನಂದ ಚವ್ಹಾಣ

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 13:41 IST
Last Updated 5 ಏಪ್ರಿಲ್ 2022, 13:41 IST
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ ರಾಂ ಅವರ 115 ನೇ ಜಯಂತಿಯಲ್ಲಿ ಗಣ್ಯರು ಭಾವಚಿತ್ರಕ್ಕೆ ನಮನ ಸಲ್ಲಿಸಿದರು
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ ರಾಂ ಅವರ 115 ನೇ ಜಯಂತಿಯಲ್ಲಿ ಗಣ್ಯರು ಭಾವಚಿತ್ರಕ್ಕೆ ನಮನ ಸಲ್ಲಿಸಿದರು   

ವಿಜಯಪುರ: ಹಸಿರು ಕ್ರಾಂತಿಯ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ದಲಿತರ ಆಶಾಕಿರಣ ಡಾ.ಬಾಬು ಜಗಜೀವನ್ ರಾಂ ಅವರ ಬದುಕು ಹಾಗೂ ಸಾಧನೆ ನಮ್ಮೆಲ್ಲರ ಬಾಳಿಗೆ ಬೆಳಕಿನಂತಿದೆ ಎಂದು ಶಾಸಕ ದೇವಾನಂದ ಚವ್ಹಾಣ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ ರಾಂ ಅವರ 115 ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ದಲಿತರ ಬದುಕಿಗೆ ಡಾ.ಬಿ.ಆರ್. ಅಂಬೇಡ್ಕರ್‌ ಅವರಂತೆ ಡಾ.ಬಾಬು ಜಗಜೀವನ್ ರಾಂ ಅವರ ಕೊಡುಗೆಯೂ ಅಪಾರವಾಗಿದ್ದು, ಅಂದು ಅವರು ಕಂಡ ಕನಸು ಇಂದಿಗೂ ನನಸಾಗಿಲ್ಲ, ಅಲ್ಲಲ್ಲಿ ಇಂದಿಗೂ ಅಸ್ಪಶ್ಯತೆ ತಾಂಡವವಾಡುತ್ತಿದೆ. ಈ ಅರ್ಥದಲ್ಲಿ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದರು.

ADVERTISEMENT

ದಲಿತರ ಬದುಕು ಹಸನಾಗಲು ಶಿಕ್ಷಣ ಒಂದೇ ಮಾರ್ಗವಾಗಿದ್ದು, ಶಿಕ್ಷಣದ ಮೂಲಕ ನಾವು ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿ, ಅಸ್ಪಶ್ಯತೆ ನಿರ್ಮೂಲನೆಗಾಗಿ ಡಾ.ಬಾಬು ಜಗಜೀವನ್ ರಾಂ ಅವರಂತಹ ಮಹಾನುಭಾವರು ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಅದರ ವಿರುದ್ಧ ಹೋರಾಡಿದ್ದಾರೆ. ಸಮಾನತೆಗಾಗಿ ಹಗಲಿರುಳೆನ್ನದೇ ಶ್ರಮಿಸಿದ್ದಾರೆ ಎಂದರು.

ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಇಂತಹ ಅಸಮಾನತೆ ಕಂಡುಬಂದರೂ ಅಲ್ಲಿ ಈಗ ಅದು ಕಾಣುತ್ತಿಲ್ಲ. ಆದರೆ, ನಮ್ಮ ದೇಶದಲ್ಲಿ ಸ್ವಾತಂತ್ರ್ಯ ನಂತರವೂ ಶತಮಾನಗಳೇ ಕಳೆದರೂ ಅಸ್ಪಶ್ಯತೆ ನಿವಾರಣೆಯಾಗದಿರುವುದು ಶೋಚನೀಯ ಎಂದು ತಿಳಿಸಿದರು.

ದಲಿತರ ಸರ್ವ ಸ್ವತಂತ್ರಕ್ಕೆ ಹಾಗೂ ಪ್ರಗತಿಗೆ ಶಿಕ್ಷಣ ಒಂದೇ ಸೂತ್ರವಾಗಿದ್ದು, ಆದ್ದರಿಂದ ಪ್ರತಿಯೊಬ್ಬರೂ ಸುಶಿಕ್ಷಿತರಾಗುವುದರ ಜೊತೆಗೆ ಇತರರೂ ಶಿಕ್ಷಿತರಾಗುವಂತೆ ಪ್ರೇರೇಪಿಸಬೇಕು. ದಲಿತರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಿಸಿ, ಅವರು ಸಮಾಜದ ಆಸ್ತಿಯಾಗುವಂತೆ, ದೇಶಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವಂತೆ ಮಕ್ಕಳ ಬದುಕು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ಮಹಿಳಾ ವಿವಿಯ ಲಕ್ಷ್ಮೀದೇವಿ ಅಲಕೋಡ ಅವರು ವಿಶೇಷ ಉಪನ್ಯಾಸ ನೀಡಿದರು. ಇಂಡಿ ತಾಲ್ಲೂಕಿನ ಪರಿಶಿಷ್ಟ ಜಾತಿಯ ಪ್ರಗತಿ ಪರ ರೈತ ಸುಭಾಸ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ಮೂವರು ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿ.ಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಮುಖಂಡರಾದ ಅಡಿವೆಪ್ಪ ಸಾಲಗಲ್‌, ಅಭಿಷೇಕ ಚಕ್ರವರ್ತಿ, ಸಿದ್ಧು ರಾಯಣ್ಣವನರ, ಭೀಮರಾಯ ಜಿಗಜಿಣಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.