ನಾಲತವಾಡ: ಬಸವ ವಸತಿ ಯೋಜನೆಯ ಹೆಚ್ಚುವರಿ 119 ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಸವ ಆವಾಸ್ ಯೋಜನೆಯ 41 ಆಸರೆ ಮನೆಗಳ ಫಲಾನುಭವಿಗಳನ್ನು ಬುಧವಾರ ಸಮೀಪದ ನಾಗಬೇನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಚಪ್ಪಾಳೆ ತಟ್ಟುವ ಮೂಲಕ ಆಯ್ಕೆ ಮಾಡಲಾಯಿತು.
2021-22ನೇ ಸಾಲಿನಲ್ಲಿ 119 ಫಲಾನುಭವಿಗಳ ಆಯ್ಕೆಯಾಗಿದ್ದರೂ ಗ್ರಾಮ ಪಂಚಾಯಿತಿಯವರು ಫಲಾನುಭವಿಗಳ ಪೂರಕ ದಾಖಲೆಗಳನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸದ ಪರಿಣಾಮ ಅನುಮೋದನೆ ವಿಳಂಬಗೊಂಡಿತ್ತು. ಇದರೊಟ್ಟಿಗೆ ಮತ್ತೆ ಮಂಜೂರಾದ 41 ಆಸರೆ ಮನೆಗಳನ್ನು ಸ್ಥಳದಲ್ಲೇ ಸಾರ್ವಜನಿಕರ ಸಮ್ಮುಖದಲ್ಲೇ ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿದ ವಸತಿ ಯೋಜನೆಯ ನಾಗರಾಳಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಎಸ್.ಕಸನಕ್ಕಿ, ಪಿಡಿಒ ಮುರಿಗೆಮ್ಮ ಪೀರಾಪುರ ಮಾತನಾಡಿ, ‘ಯಾವುದೇ ಯೋಜನೆಗಳ ಸೌಕರ್ಯಗಳಲ್ಲಿ ಸ್ಥಳೀಯರ ಸಹಕಾರ ಬಹು ಮುಖ್ಯ. ನಿಮ್ಮ ಊರಿಗೆ ಮಂಜೂರಾದ 160 ಆಸರೆ ಮನೆಗಳನ್ನು ಜನರ ಅಭಿಪ್ರಾಯ ಸಂಗ್ರಹಿಸಿ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿದ್ದೇವೆ. ಇದಕ್ಕೆ ಚಪ್ಪಾಳೆ ಮೂಲಕ ಒಕೆ ಎಂದಿರುವ ವಿಡಿಯೊ ದಾಖಲೆ ಇದೆ. ಇಷ್ಟಾದರೂ ಮತ್ತೆ ಯಾವುದಾದರೂ ತಕರಾರು ಇದ್ದಲ್ಲಿ ಎಲ್ಲ ಫಲಾನುಭವಿಗಳ ಆಯ್ಕೆಯನ್ನು ರದ್ದುಗೊಳಿಸುವ ಹಕ್ಕು ನಮಗಿದೆ’ ಎಂದು ಹೇಳಿದರು.
ಕರ ಬಾಕಿ: ಸಮೀಪದ ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದವರು ಕೋಟಿಗಟ್ಟಲೇ ರೂಪಾಯಿ ಕರ ತುಂಬುವುದನ್ನು ಬಾಕಿ ಇರಿಸಿಕೊಂಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಯುವ ಜನ ಸೇನೆಯ ಶಿವಾನಂದ ವಾಲಿ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಪಿಡಿಒ, ‘ಈಗಾಗಲೇ ಕಂಪನಿಗೆ ಭೇಟಿ ನೀಡಿದ್ದು ಒಂದು ಮೇಗಾವ್ಯಾಟ್‌ಗೆ ತುಂಬಬೇಕಾದ ಕರದ ವಿವರ ಕೇಳಿ ನೋಟಿಸ್ ಕೊಡುತ್ತೇವೆ’ ಎಂದರು.
ಗ್ರಾಮದ ಶಿವರುದ್ರಯ್ಯ ಹಿರೇಮಠ, ಸಂಗಣ್ಣ ಡಂಬಳ, ಪಿಡಿಒ ಮುರುಗೆಮ್ಮ, ಎಡಿ ಪಿ.ಎಸ್. ಕಸನಕ್ಕಿ, ವಸತಿ ನಿಗಮದ ನಾಗರಾಳಮಠ, ಗ್ರಾ.ಪಂ ಅಧ್ಯಕ್ಷೆ ಶಕುಂತಲಾ ಕಾಜಗಾರ, ಉಪಾಧ್ಯಕ್ಷೆ ಹೇಮಾ ವಾಲಿಕಾರ, ಭೀಮಣ್ಣ ರಕ್ಕಸಗಿ, ಗದ್ದೆಪ್ಪ ಗೌಂಡಿ, ಬಸಮ್ಮ ಗೌಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.