
ಪ್ರಜಾವಾಣಿ ವಾರ್ತೆ
ನಿಡಗುಂದಿ: ‘ಜಗತ್ತಿನಲ್ಲಿ ಜ್ಞಾನವೇ ಶ್ರೇಷ್ಠ. ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಪುಸ್ತಕಗಳಿಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ವಂದಾಲ ಹೇಳಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ‘ಅಧಿಕಾರಿಗಳ ನಡೆ ವಸತಿ ನಿಲಯದ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ ಎಂ. ವಿಶ್ವೇಶ್ವರಯ್ಯ, ಎ.ಪಿ.ಜೆ. ಅಬ್ದುಲ್ ಕಲಾಂ, ಬಿ.ಆರ್. ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು. ಸತತ ಅಧ್ಯಯನದಿಂದ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಒದಗಿಸಿದ ಸೌಲಭ್ಯಗಳ ಸದುಪಯೋಗ ಪಡೆದು, ಜೀವನ ಸುಂದರಗೊಳಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ‘ವಿದ್ಯಾರ್ಥಿಗಳಿಗೆ ಓದು ಸಂಗಾತಿ ಆಗಬೇಕು. ನಿರಂತರ ಅಭ್ಯಾಸವು ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುತ್ತದೆ. ನಿಲಯದಲ್ಲಿ ಅಧಿಕಾರಿಗಳು ವಾಸ್ತವ್ಯ ಮಾಡಿ, ವಿದ್ಯಾರ್ಥಿಗಳೊಂದಿಗೆ ಬೆರೆತು, ಅವರಿಗೆ ಭರವಸೆ ತುಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.
ಬಸವನಬಾಗೇವಾಡಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರಾದ ಮುತ್ತು ಹೆಬ್ಬಾಳ, ಸಲಿಂ ದಡೇದ್, ಜಯಲಕ್ಷ್ಮಿ ಸಗರನಾಳ, ಎಸ್.ಎಸ್. ಹೊಳಿ, ಬಸವರಾಜ ಚಕ್ರವರ್ತಿ, ಬಸವರಾಜ ಬಡಿಗೇರ, ಮೋಹನ್ ಜಾದವ್, ಸೈಪಾನ್ ಕೊರ್ತಿ, ರಸೂಲ್ ಪಿಂಜಾರ ಹುಸೇನಪ್ಪ, ಭೈರಪ್ಪ ಕುಂಬಾರ, ರಾಜೇಶ್ವರಿ ಗೋಗಿ, ಶಾಂತಾ ಕಸ್ತೂರಿ, ಅಮಿತ್ ಸಗರನಾಳ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧಿಕ್ಷಕ ಎಂ.ಎಂ. ದಫೇದಾರ, ಅಶೋಕ ನಡವಿನಮನಿ, ವಿರೇಶ ಗೂಡ್ಲಮನಿ ಇದ್ದರು.
‘ಸಮಾನತೆ ಭಾವ ಮೂಡಿಸುವ ವಿದ್ಯಾರ್ಥಿನಿಲಯ’
‘ಮೌಲ್ಯಯುತ ಶಿಕ್ಷಣ ಪಡೆಯಲು ಸಂಸ್ಕಾರ ಅವಶ್ಯ. ಜಗತ್ತಿನಲ್ಲಿ ಕದಿಯಲಾಗದ ಅಂಶ ಜ್ಞಾನ ಮಾತ್ರ. ಯಾರೂ ಕದಿಯಲಾಗದ ವಿದ್ಯೆಗೆ ವಿದ್ಯಾರ್ಥಿಗಳು ದೊರೆಗಳಾಗಬೇಕು. ಎಲ್ಲರಲ್ಲಿ ಸಮಾನತೆಯ ಭಾವ ಮೂಡಿಸುವುದು ವಿದ್ಯಾರ್ಥಿನಿಲಯಗಳ ಉದ್ದೇಶ. ವಿದ್ಯಾರ್ಥಿ ಜೀವನದಲ್ಲಿ ಇದರ ಪಾತ್ರ ಬಹಳ ದೊಡ್ಡದು’ ಎಂದು ಉಪನ್ಯಾಸಕ ಬಸವರಾಜ ಹಂಚಲಿ ತಿಳಿಸಿದರು. ಸಾಹಿತಿ ಮನು ಪತ್ತಾರ ಮಾತನಾಡಿ ‘ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಸಾಕಷ್ಟು ಸಮಯ ಸಿಗುತ್ತದೆ. ವೇಳಾಪಟ್ಟಿ ಮಾಡಿಕೊಂಡು ಅಧ್ಯಯನ ಮಾಡಿದಾಗ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.