ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ (ಮೂಲನಂದೀಶ್ವರ) ಜಾತ್ರೋತ್ಸವವು ಶ್ರಾವಣ ಮಾಸದ ಮೂರನೇ ಸೋಮವಾರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ವೈಭವದ ಮೆರವಣಿಗೆಯೊಂದಿಗೆ ಐದು ದಿನಗಳ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ನಸುಕಿನಿಂದಲೇ ಮೂಲನಂದೀಶ್ವರನಿಗೆ ವಿಶೇಷ ಅಭಿಷೇಕ ನೆರವೇರಿತು. ಭಕ್ತರು ಅಭಿಷೇಕ, ಪೂಜೆ ಸಲ್ಲಿಸಿ, ಉರುಳು ಸೇವೆ, ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಬೆಳಿಗ್ಗೆ ವಿವಿಧ ವಾದ್ಯ ವೈಭವಗಳೊಂದಿಗೆ ಪಟ್ಟಣದ ಗುರುಹಿರಿಯರು, ಬಸವೇಶ್ವರ ಸೇವಾ ಸಮಿತಿ, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಗೂ ಪ್ರಮುಖರು ಸೇರಿ ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಸಂಪ್ರದಾಯಿಕವಾಗಿ ದೇವಸ್ಥಾನಕ್ಕೆ ಬರಮಾಡಿಕೊಂಡರು. ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಭಕ್ತರ ಸಮ್ಮುಖದಲ್ಲಿ ಉದ್ಘೋಷಗಳೊಂದಿಗೆ ಮೂಲನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಬೆಳಗಿ ನಂದಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಕಟ್ಟೆಯಲ್ಲಿನ ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವೈಭವದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಹೋರಿಮಟ್ಟಿ ದೇವಸ್ಥಾನದ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ ಕಳಸದೊಂದಿಗೆ ಪಲ್ಲಕ್ಕಿ ಉತ್ಸವವು ಪಟ್ಟಣದ ಅಗಸಿ, ಬಸವೇಶ್ವರ ವೃತ್ತ, ಚನ್ನಮ್ಮ ವೃತ್ತ ಹಾಗೂ ಇಂಗಳೇಶ್ವರ ರಸ್ತೆಯ ಮಾರ್ಗವಾಗಿ ಸಾಗಿ ಪುರಾಣ ಪ್ರಸಿದ್ಧ ಹೋರಿಮಟ್ಟಿ ಗುಡ್ಡಕ್ಕೆ ದರ್ಶನ ನೀಡಿ ಈ ವರ್ಷದ ನುಡಿ ಹೇಳಿಕೆಯಾಯಿತು. ಸಂಜೆ ಮರಳಿ ಕಂಬಿ ಕಟ್ಟೆಗೆ ಆಗಮಿಸಿದ ಬೆಳ್ಳಿ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಬಸವೇಶ್ವರ ಸಿಬಿಎಸ್ಇ ಶಾಲೆ ಆವರಣದಲ್ಲಿ ಆಕರ್ಷಕ ಸಿಡಿ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.
ಬೆಳ್ಳಿ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಕಲಾತಂಡಗಳಾದ ಸುತ್ತಟ್ಟಿ ಜಾಂಜ್ ಮೇಳ, ದಾವಣಗೆರೆಯ ನಂದಿಕೋಲು, ಆನೆ, ಕಾಖಂಡಕಿಯ ಗೊಂಬೆಗಳು, ತೆಲಗಿ ಕರಡಿಮಜಲು, ಕೇರಳದ ಚಂಡಿಮೇಳಗಳ ನೃತ್ಯ ಪ್ರದರ್ಶನ ಎಲ್ಲರನ್ನು ಆಕರ್ಷಿಸಿದವು. ಜೇನುಗೂಡು ಸಂಸ್ಥೆಯವರು ಐತಿಹಾಸಿಕ ಬಸವತಿರ್ಥ ಸ್ವಚ್ಛಗೊಳಿಸಿ, ತೀರ್ಥದ ಮಧ್ಯಭಾಗದಲ್ಲಿ ತೇಲಿಬಿಟ್ಟ ಬಸವಮೂರ್ತಿ ಭಕ್ತರನ್ನು ಸೆಳೆಯಿತು. ವಿವೇಕ ಬ್ರಿಗೇಡ್ ಸದಸ್ಯರು ಭಕ್ತರಿಗೆ ಅಂಬಲಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ಬಸವಸೈನ್ಯ ಕಾರ್ಯಕರ್ತರು, ಸಮಿತಿಯ ಸ್ವಯಂ ಸೇವಕರ ತಂಡ ಹಾಗೂ ಇತರೆ ಸಂಘಸಂಸ್ಥೆಗಳ ಸದಸ್ಯರು ಜಾತ್ರೋತ್ಸವದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಿದರು.
ಉತ್ಸವದಲ್ಲಿ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ, ಹಿರಿಯರಾದ ಲೋಕನಾಥ ಅಗರವಾಲ, ಎಂ.ಎಸ್. ಆದಿಗೊಂಡ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಅನಿಲ ಅಗರವಾಲ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ಮುತ್ತಪ್ಪ ಗುಂಡಳ್ಳಿ, ಬಸಣ್ಣ ಕಲ್ಲೂರ, ಜಗದೀಶ ಕೊಟ್ರಶೆಟ್ಟಿ, ರವಿ ಪಟ್ಟಣಶೆಟ್ಟಿ, ಬಸವರಾಜ ಕೋಟಿ, ಶೇಖರ ಗೊಳಸಂಗಿ, ಮುಖಂಡರಾದ ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಶ್ರೀಶೈಲ ಪರಮಗೊಂಡ, ಶ್ರೀಕಾಂತ ಕೊಟ್ರಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.