ADVERTISEMENT

ಬಸವನಬಾಗೇವಾಡಿ: ಐತಿಹಾಸಿಕ ಬಸವತೀರ್ಥ ಸ್ವಚ್ಛತಾ ಸೇವೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:06 IST
Last Updated 11 ಆಗಸ್ಟ್ 2025, 4:06 IST
ಬಸವನಬಾಗೇವಾಡಿ ಪಟ್ಟಣದ ಐತಿಹಾಸಿಕ ಮೂಲನಂದೀಶ್ಚರ ದೇವಸ್ಥಾನ ಹಿಂಭಾಗದಲ್ಲಿರುವ ಪುರಾತನ ಬಸವತೀರ್ಥದಲ್ಲಿ ಜೇನುಗೂಡು ಸಂಸ್ಥೆಯ ಸ್ವಯಂ ಸೇವಕರು ಸ್ವಚ್ಛತಾ ಸೇವೆ ಸಲ್ಲಿಸಿದರು
ಬಸವನಬಾಗೇವಾಡಿ ಪಟ್ಟಣದ ಐತಿಹಾಸಿಕ ಮೂಲನಂದೀಶ್ಚರ ದೇವಸ್ಥಾನ ಹಿಂಭಾಗದಲ್ಲಿರುವ ಪುರಾತನ ಬಸವತೀರ್ಥದಲ್ಲಿ ಜೇನುಗೂಡು ಸಂಸ್ಥೆಯ ಸ್ವಯಂ ಸೇವಕರು ಸ್ವಚ್ಛತಾ ಸೇವೆ ಸಲ್ಲಿಸಿದರು   

ಬಸವನಬಾಗೇವಾಡಿ: ನಿಸ್ವಾರ್ಥ ಸೇವೆಗೆ ಹೆಸರಾಗಿರುವ ಪಟ್ಟಣದ ಜೇನುಗೂಡು ಸಂಸ್ಥೆಯ ಸ್ವಯಂ ಸೇವಕರ ತಂಡವು ಐತಿಹಾಸಿಕ ಬಸವೇಶ್ವರ ಜಾತ್ರೋತ್ಸವ ಹಿನ್ನೆಲೆ ಭಾನುವಾರ ಐತಿಹಾಸಿಕ ಮೂಲ‌ನಂದೀಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಪುರಾತನ ಬಸವ ತೀರ್ಥವನ್ನು ಸಂಪೂರ್ಣ ಸ್ವಚ್ಛಗೊಳಿಸಿದರು.

ಸ್ಥಳೀಯ ವಿರಕ್ತಮಠದ ಸಿದ್ದಲಿಂಗ‌ ಸ್ವಾಮೀಜಿ ಮಾತನಾಡಿ, ಜೇನುಗೂಡು ಸಂಸ್ಥೆ ಕಳೆದ‌ ಹಲವಾರು ವರ್ಷಗಳಿಂದ ನಿಸ್ವಾರ್ಥವಾಗಿ ಐತಿಹಾಸಿಕ‌ ಸ್ಥಳಗಳಲ್ಲಿ‌ ಸ್ವಚ್ಛತೆ‌, ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಿದೆ. ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಪುರಾತನ ಬಸವತೀರ್ಥದಲ್ಲಿ ಪ್ರತಿ ವರ್ಷ ಹಬ್ಬಜಾತ್ರೆಗಳ‌ ಸಂದರ್ಭದಲ್ಲಿ ಜೇನುಗೂಡು ಸ್ವಯಂ ಸೇವಕರು ಸ್ವಚ್ಛತಾ ಸೇವೆ ಮಾಡುತ್ತಿದ್ದಾರೆ ಎಂದರು.

ಪುರಾತನ ಬಸವತೀರ್ಥವು ಸಹ ಬಸವೇಶ್ವರ ದೇವಸ್ಥಾನದಷ್ಟೇ ಮುಖ್ಯವಾದ ಐತಿಹಾಸಿಕ ಸ್ಥಳ. ತಾಲ್ಲೂಕು ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹೊಸ ದೇವರ ಮೂರ್ತಿಗಳನ್ನು ತಂದಾಗ ಮತ್ತು ಜಾತ್ರೋತ್ಸವಗಳ ವೇಳೆ ದೇವರ ಮೂರ್ತಿಗಳಿಗೆ ಇಲ್ಲಿಯೇ ತಂದು ಗಂಗಾಪೂಜೆ ಮಾಡುತ್ತಾರೆ. ಇಲ್ಲಿನ ಪವಿತ್ರ‌ ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಬೇಕು ಹೊರತು ಇಲ್ಲಿ ಕಸಕಡಿ ಹಾಕುವುದಲ್ಲ. ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದವರು ಇಲ್ಲಿ ಆಗಾಗ ಸ್ವಚ್ಛತೆ ಕೈಗೊಂಡು ಉತ್ತಮ ನಿರ್ವಹಣೆ ಮಾಡಬೇಕು. ಇದು ಪ್ರತಿ ನಾಗರಿಕರ ಜವಾಬ್ದಾರಿ ಸಹ ಆಗಿದೆ ಎಂದರು.

ಸ್ವಚ್ಛತಾ ಸೇವೆಯಲ್ಲಿ ಜೇನುಗೂಡು ಸಂಸ್ಥೆಯ ಸ್ವಯಂ ಸೇವಕರಾದ ಪದ್ಮಣ್ಣ ಒಡೆಯರ್, ದಯಾನಂದ ಹೊರ್ತಿ, ಜಗದೀಶ ತಳವಾರ, ಬಸವರಾಜ ಕಡಕೋಳ, ಸುಧೀರ ಗಾಯಕ್ವಾಡ, ಮಂಜುನಾಥ ಕುಂಬಾರ, ಬಸವರಾಜ ಮಾದನಶೆಟ್ಟಿ, ಮಹಾಂತೇಶ ಅವಟಿ, ಪ್ರದೀಪ್ ಮುಂಜಾನೆ, ಸತೀಶ ಕ್ವಾಟಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.