ADVERTISEMENT

ಸಹಕಾರ ಸಚಿವಾಲಯ ಆರಂಭ: ಐತಿಹಾಸಿಕ ನಿರ್ಣಯ ಎಂದ ಸಿದ್ರಾಮಪ್ಪ ಉಪ್ಪಿನ

ಕೇಂದ್ರದ ಸರ್ಕಾರದ ಕ್ರಮ ಸ್ವಾಗತಿಸಿದ ಸಹಕಾರ ಭಾರತಿ–ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 15:05 IST
Last Updated 8 ಜುಲೈ 2021, 15:05 IST
   

ವಿಜಯಪುರ: ದೇಶದಲ್ಲಿ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಪ್ರತ್ಯೇಕ ಸಹಕಾರಿ ಸಚಿವಾಲಯವನ್ನು ಸ್ಥಾಪಿಸಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವಿಜಯಪುರ ಜಿಲ್ಲಾ ನಿರ್ದೇಶಕ ಸಿದ್ರಾಮಪ್ಪ ಉಪ್ಪಿನ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಭಾರತಿ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರವುಪ್ರತ್ಯೇಕ ಸಚಿವಾಲಯ ಸ್ಥಾಪಿಸಿರುವುದು ದೇಶದ ಸಹಕಾರಿ ಚಳವಳಿಯಲ್ಲಿ ಮೈಲುಗಲ್ಲಾಗಿದ್ದು, ಈ ಐತಿಹಾಸಿಕ ನಿರ್ಣಯ ಕೈಗೊಂಡ ಕೇಂದ್ರ ಸರ್ಕಾರವನ್ನು ಅಭಿನಂದಿಸುವುದಾಗಿ ಹೇಳಿದರು.

ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಿಂದಾಗಿ ಕೇಂದ್ರದಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗಲಿದೆ. ಸಹಕಾರ ಕ್ಷೇತ್ರವನ್ನು ಆರೋಗ್ಯಕರವಾಗಿ ಮತ್ತು ಬಲಯುವಾಗಿ ಬೆಳಸಲು ಒಬ್ಬರು ಸಚಿವರು ಇರುವುದರಿಂದಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ದೇಶದಲ್ಲಿ ಸಹಕಾರಿ ಕ್ಷೇತ್ರ ಆರ್ಥಿಕ ಲಾಭಗಳಿಸುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹು ರಾಜ್ಯ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯನ್ನು ಶಕ್ತಗೊಳಿಸಲು ಈ ಸಚಿವಾಲಯವು ಕೆಲಸ ಮಾಡುತ್ತದೆ ಎಂಬ ಆಶಾಭಾವ ಮೂಡಿದೆ ಎಂದರು.

ಸಹಕಾರಿ ಕ್ಷೇತ್ರ ದೇಶದ ಜನರ ಜೀವನ ಪದ್ಧತಿಯಾಗಿ ಬೆಳೆದಿದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಶೇ 40ರಷ್ಟು ಪಾಲನ್ನು ಸಹಕಾರ ಕ್ಷೇತ್ರದ ಮೂಲಕವೇ ನಿರ್ವಹಿಸಲಾಗುತ್ತಿದೆ. ಸಹಕಾರಿ ಕ್ಷೇತ್ರದ ಮೂಲಕವೇ ಸರ್ಕಾರದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಸಹಕಾರ ಭಾರತಿ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಸತತ ಪ್ರಯತ್ನದಿಂದ ಸಹಕಾರಿ ಸಚಿವಾಲಯ ಸ್ಥಾಪನೆಯಾಗಿರುವುದು ಫಲ ಸಿಕ್ಕಂತಾಗಿದೆ ಎಂದು ಹೇಳಿದರು.

ಸಹಕಾರ ಭಾರತಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಆರ್‌.ನಾಯಿಕ, ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿ ಗುರುಶಾಂತ ನಿಡೋಣಿ, ಸಹಕಾರ ಭಾರತಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎಂ.ಜಿ.ಪಾಟೀಲ್‌, ಸಹಕಾರ ಭಾರತಿ ವಿಜಯಪುರ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀಮಂತ ಇಂಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.