ವಿಜಯಪುರ: ‘ಸಿಂಪಿ ಲಿಂಗಣ್ಣ ಮತ್ತು ಮಧುರ ಚೆನ್ನರವರ ಕಾವ್ಯ ಸಂಸ್ಕೃತಿಯ ಮುಂದುವರಿಕೆಯಾಗಿರುವ ‘ರಾಗಂ’ ನಮ್ಮ ಜಿಲ್ಲೆಯ ಹೆಮ್ಮೆ ಹಾಗೂ ಭೀಮಾ ತೀರದ ಸಾಹಿತ್ಯ ಶಕ್ತಿಯಾಗಿದ್ದಾರೆ’ ಎಂದು ಡಿವೈಎಸ್ಪಿ ಬಸವರಾಜ್ ಎಲಿಗಾರ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ‘ರಾಗಂ: ನೂರೊಂದು ರಾಗ’ ಅಭಿನಂದನಾ ಸಮಾರಂಭ ಮತ್ತು ‘ಗಾಂಧಿ ದ ಲಾಸ್ಟ್ ಡೇಸ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಕ್ತ ಸಿಕ್ತ ಭೀಮಾ ತೀರದಲ್ಲಿ ಜನ್ಮ ತಾಳಿದ ರಾಗಂ ಭೀಮಾತೀರವನ್ನು ಮತ್ತೊಮ್ಮೆ ಅಕ್ಷರದ ನಾಡನ್ನಾಗಿ ಮಾಡಲು ಹೊರಟಿದ್ದಾರೆ. ಎಲ್ಲ ಪ್ರಕಾರಗಳ ಸಾಹಿತ್ಯ ರಚಿಸಿದ್ದಾರೆ’ ಎಂದು ಕವಿ ವಾಸುದೇವ ನಾಡಿಗ ಹೇಳಿದರು.
ಡಾ.ಮಹಾಂತೇಶ ಬಿರಾದಾರ, ‘ಈ ತಲೆಮಾರಿನ ಅತ್ಯಂತ ಗಂಭೀರ, ಜವಾಬ್ದಾರಿಯುತ ಲೇಖಕ ರಾಗಂ, ಗಾಂಧಿ ಚಿಂತನೆಯನ್ನು ಮತ್ತೆ ಪ್ರಸ್ತುತಗೊಳಿಸುತ್ತಿದ್ದಾರೆ’ ಎಂದು ಹೇಳಿದರು.
‘ಗಾಂಧಿ ದಿ ಲಾಸ್ಟ್ ಡೇಜ್’ ಪುಸ್ತಕ ಕುರಿತು ಮಾತನಾಡಿದ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ‘ರಾಗಂ ಅವರ ಈ ಕೃತಿ ನಮ್ಮ ತಲೆಮಾರಿನಲ್ಲಿ ರಚನೆಯಾದ ಗಾಂಧೀಜಿಯ ಕೊನೆಯ ಸಂಕಷ್ಟದ ದಿನಗಳ ಕುರಿತ ಅಧಿಕೃತ ಏಕೈಕ ಗ್ರಂಥವಾಗಿದೆ’ ಎಂದು ತಿಳಿಸಿದರು.
ಜೋಗತಿ ನೃತ್ಯ, ಭರತನಾಟ್ಯ, ಜನಪದ ಹಾಡುಗಳು ಗಾಯನ ಪ್ರೇಕ್ಷಕರನ್ನು ರಂಜಿಸಿತು.
ವಿಜಯಪುರ ಜಿಲ್ಲಾ ಪರಿಷತ್ತಿನ ಅಧ್ಯಕ್ಷ ಶರಣು ಸಬರದ, ಡಾ. ಎಚ್.ಎಸ್. ಸತ್ಯನಾರಾಯಣ, ಸಾಹಿತಿಗಳಾದ ಡಾ. ಆರ್.ಕೆ. ಕುಲಕರ್ಣಿ, ಡಾ. ಮದಭಾವಿ, ಅಶೋಕ ಹಂಚಲಿ, ಚಿಂತಕ ಜಂಬುನಾಥ ಮಳಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.