ADVERTISEMENT

ಬಿಜ್ಜರಗಿ: ಸಿದ್ದೇಶ್ವರ‌ ಸ್ವಾಮೀಜಿ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:20 IST
Last Updated 21 ಅಕ್ಟೋಬರ್ 2025, 4:20 IST
ಸಿದ್ದೇಶ್ವರ ಸ್ವಾಮೀಜಿ
ಸಿದ್ದೇಶ್ವರ ಸ್ವಾಮೀಜಿ   

ತಿಕೋಟಾ: ಶತಮಾನದ ಸಂತ, ಜ್ಞಾನಯೋಗಿ‌ ಸಿದ್ದೇಶ್ವರ ಶ್ರೀಗಳ 85ನೇ ಜಯಂತ್ಯುತ್ಸವವನ್ನು ಅ.22ರ ದೀಪಾವಳಿ ಪಾಡ್ಯದಂದು ಪೂಜ್ಯರ ಜನ್ಮಸ್ಥಳ ತಾಲ್ಲೂಕಿನ ಬಿಜ್ಜರಗಿ‌ ಗ್ರಾಮದ ಸರ್ಕಾರಿ ಕನ್ನಡ ಗಂಡು‌ ಮಕ್ಕಳ ಪ್ರಾಥಮಿಕ ಶಾಲಾವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಿದ್ದೇಶ್ವರ ಶ್ರೀಗಳ ಜಯಂತ್ಯುತ್ಸವದ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಪೂಜ್ಯರ ಪೂರ್ವಾಶ್ರಮದ ಮನೆಯಿಂದ ಕನ್ನಡ ಗಂಡು ಮಕ್ಕಳ ಶಾಲೆಯವರೆಗೆ ಪೂಜ್ಯರ ಚಿತ್ರವುಳ್ಳ ಎತ್ತಿನ ಬಂಡಿ ಮೆರವಣಿಗೆಯು ವಾದ್ಯ ಮೇಳ ಹಾಗೂ ಊರಿನ ಭಕ್ತ ಜನರೊಂದಿಗೆ ಒಡಗೂಡಿ ಸಾಗಲಿದೆ. ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರಕ್ತದಾನ ಹಾಗೂ ಉಚಿತ ಚಿಕಿತ್ಸಾ ಶಿಬಿರವು ಪ್ರಾಥಮಿಕ ಅರೋಗ್ಯ ಕೇಂದ್ರ ಕನಮಡಿ ಹಾಗೂ ಜ್ಞಾನಯೋಗ ಲಯನ್ಸ್ ಕ್ಲಬ್ ಬೆಂಗಳೂರು ಸಹಯೋಗದಲ್ಲಿ ಜರುಗಲಿದೆ.‌

ಸಂಜೆ 4 ಗಂಟೆಗೆ ವೇದಿಕೆ ಕಾರ್ಯಕ್ರಮವು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ತಿಕೋಟಾ ವಿರಕ್ತಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೃಷ್ಣಾ ಕಿತ್ತೂರು ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ,
ಡಾ.ಶ್ರದ್ಧಾನಂದ ಸ್ವಾಮೀಜಿ, ಯತೀಶ್ವರಾನಂದ ಸ್ವಾಮೀಜಿ, ಬೀಳೂರು ವಿರಕ್ತಮಠದ ಚನ್ನಬಸವ ಗುರುಬಸವ ಸ್ವಾಮೀಜಿ ಹಾಗೂ ಕಾಖಂಡಕಿ ಗುರುದೇವಾಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಮುಂತಾದ ಗುರುಗಳ ಸಾನಿಧ್ಯದಲ್ಲಿ ಜರಗುವುದು. 2025-26ನೇ ಸಾಲಿನಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರುವುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.