
ವಿಜಯಪುರ: ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ಬದಿಗಿರಿಸಿ ನೇರವಾಗಿಯೇ ರೈತರ ವಿಷಯ ಚರ್ಚೆ ಮಾಡಬೇಕು, ಸದನದ ಒಳಗೂ-ಹೊರಗೂ ಬಿಜೆಪಿ ರೈತರ ಪರ ಹೋರಾಟ ನಡೆಯಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಪರಿಹಾರ ವಿಷಯವಾಗಿ ರಾಜ್ಯ ಸರ್ಕಾರ ಬೇಜವಾಬ್ದಾರಿ ತೋರಿದೆ. ಈ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಇಲ್ಲವೇ, ಜಾಗ ಖಾಲಿ ಮಾಡಿ ಹೊರಡಬೇಕು ಎಂದು ಎಚ್ಚರಿಕೆ ನೀಡಿದರು.
ಕೃಷಿ ಸಚಿವರು, ತೋಟಗಾರಿಕಾ ಸಚಿವರು ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ, ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ರೈತರ ಹೊಲದಲ್ಲಿ ಪಾದ ಇರಿಸಿಲ್ಲ, ಒಂದೇ ಒಂದು ತಾಲ್ಲೂಕುಗಳಿಗೆ ಭೇಟಿ ನೀಡಿಲ್ಲ, ಕೆಡಿಪಿ ಸಭೆಯನ್ನೂ ನಡೆಸಿಲ್ಲ, ನೆರೆ ಪರಿಹಾರ ವಿಷಯವಾಗಿಯೂ ಒಂದೇ ಒಂದು ಕಡೆ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶೇ63 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಾಚಾರವಿದೆ ಎಂದು ಉಪಲೋಕಾಯುಕ್ತರೇ ಹೇಳಿದ್ದಾರೆ, ಇದೆಲ್ಲವೂ ಹಣ ಎಐಸಿಸಿಗೆ ಹೋಗುತ್ತಿದೆ, ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಎಐಸಿಸಿ ಎಟಿಎಂ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಎರಡೂವರೆ ವರ್ಷದಲ್ಲಿ 43 ತಾಲ್ಲೂಕುಗಳಲ್ಲಿ 1437 ಗ್ರಾಮಗಳು ಅತಿವೃಷ್ಟಿಯಿಂದ ಬಾಧಿತವಾಗಿವೆ, ಮುಖ್ಯಮಂತ್ರಿಗಳು ಕೇವಲ ಹೆಲಿಕ್ಯಾಪ್ಟರ್‌ನಲ್ಲಿ ಗಿರಕಿ ಹೊಡೆದು ಸಮೀಕ್ಷೆ ನಡೆಸಿದ್ದಾರೆ, ರಾಜ್ಯ ಸರ್ಕಾರ ಕೇವಲ 14.48 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಹೇಳಿದೆ. ಆದರೆ, ನಾವೇ ಸ್ವತ: ಬೆಳೆ ಹಾನಿ ಸಮೀಕ್ಷೆ ನಡೆಸಿದ್ದಾಗ 38 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆದರೆ, ವಾಸ್ತವವಾಗಿ ಆಗಿರುವ ಬೆಳೆ ಹನಿ ಸರ್ಕಾರದ ಗಮನದಲ್ಲಿಯೇ ಇಲ್ಲ ಎಂದು ಹೇಳಿದರು.
ಯಾಮಾರಿಸುವ ಕೆಲಸ: ಮೆಕ್ಕೆಜೋಳ ಮಾರಾಟ ಮಾಡಲು ವಿಜಯಪುರ ಜಿಲ್ಲೆಯ ರೈತರು ಧಾರವಾಡಕ್ಕೆ ಸ್ಯಾಂಪಲ್ ತೆಗೆದುಕೊಂಡು ಹೋಗಿ ಖರೀದಿಗೆ ಗ್ರೀನ್ ಸಿಗ್ನಲ್ ಸಿಕ್ಕಾಗ ಕ್ವಿಂಟಾಲ್ ಗಟ್ಟಲೇ ಮೆಕ್ಕೆಜೋಳವನ್ನು ತೆಗೆದುಕೊಂಡುಹೋಗಬೇಕು, ಇದಕ್ಕೆ ಕನಿಷ್ಠ ₹10 ಸಾವಿರ ಸಾಗಾಣಿಕೆ ವೆಚ್ಚವೇ ತಗಲುತ್ತದೆ, ಈ ಮೂಲಕ ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ನಡಹಳ್ಳಿ ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ರಮೇಶ ಭೂಸನೂರ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ್ ರೆಡ್ಡಿ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಸಂಜಯ ಪಾಟೀಲ ಕನಮಡಿ, ಸಂದೀಪ ಪಾಟೀಲ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೂ ವಿಜಯಪುರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಆಗುವುದಿಲ್ಲ ನಮ್ಮ ಸರ್ಕಾರ ಬಂದಾಗ ಹೋರಾಟಗಾರರ ಬೇಡಿಕೆ ಈಡೇರಿಸುತ್ತೇವೆ–ಎ.ಎಸ್. ಪಾಟೀಲ ನಡಹಳ್ಳಿಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.