ADVERTISEMENT

ಜೀತಕ್ಕಿದ್ದ 20 ಕಾರ್ಮಿಕರು ಬಂಧಮುಕ್ತ

ಕಂಪನಿಯಿಂದ ವರದಿ ಕೇಳಿದ ಎ.ಸಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 15:29 IST
Last Updated 29 ನವೆಂಬರ್ 2019, 15:29 IST

ವಿಜಯಪುರ: ಚಡಚಣ ಪಟ್ಟಣದ ಏತನೀರಾವರಿ ಯೋಜನೆ ಕಾಮಗಾರಿಯಲ್ಲಿ ತೊಡಗಿಸಿಕೊಂಡು ನರಕಯಾತನೆ ಅನುಭವಿಸುತ್ತಿದ್ದ 20 ಜೀತದಾಳುಗಳನ್ನು ಶುಕ್ರವಾರ ರಕ್ಷಿಸಿ, ಬಂಧಮುಕ್ತಗೊಳಿಸಲಾಗಿದೆ.

ಇವರೆಲ್ಲರೂ ಬೆಳಗಾವಿಯ ಆದಿತ್ಯ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಇಂಡಿ ಉಪ ವಿಭಾಗಾಧಿಕಾರಿ, ಕಂದಾಯ ನಿರೀಕ್ಷಕರು, ಚಡಚಣ ತಹಶೀಲ್ದಾರ್ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕಾರ್ಮಿಕರು ಜೀತಪದ್ಧತಿಯಡಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ.

‘₹10 ಸಾವಿರದಿಂದ ₹50 ಸಾವಿರ ಮುಂಗಡಕೊಟ್ಟು ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಗಳಿಂದ ಇವರನ್ನು ಕರೆತರಲಾಗಿತ್ತು. ತಿಂಗಳಿಗೆ ₹2 ಸಾವಿರ ಸಂಬಳ ಕೊಡಲಾಗುತ್ತಿತ್ತು. ಅಲ್ಲದೆ, ಇವರಿಗೆ ಸರಿಯಾಗಿ ಊಟ, ವಸತಿ ವ್ಯವಸ್ಥೆ ಕಲ್ಪಿಸದೆ, ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ’ ಎಂದು ಇಂಡಿ ಉಪ ವಿಭಾಗಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಆದಿತ್ಯ ಕನ್‌ಸ್ಟ್ರಕ್ಷನ್ ಕಂಪನಿಯು ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚಿಸಲಾಗಿದೆ. ವಾರದೊಳಗೆ ವರದಿ ಸಲ್ಲಿಸದಿದ್ದಲ್ಲಿ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.