ಬಸವನಬಾಗೇವಾಡಿ : ಕಳೆದ ಮೇ 25 ರಂದು ಕಳ್ಳತನವಾಗಿದ್ದ ತಾಲ್ಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಬಂಗಾರ ಅಡವಿಟ್ಟಿದ್ದ ನೂರಾರು ಗ್ರಾಹಕರು ತಮ್ಮ ಬಂಗಾರವನ್ನು ವಾಪಸ್ ನೀಡಬೇಕು ಇಲ್ಲವೇ ಈಗಿನ ಬಂಗಾರದ ದರದ ಮೊತ್ತವನ್ನು ನೀಡಬೇಕು ಎಂದು ಆಗ್ರಹಿಸಿ ಗುರುವಾರ ಬ್ಯಾಂಕ್ ಬಂದ್ ಮಾಡಿಸಿ ತೀವ್ರ ಪ್ರತಿಭಟನೆ ನಡೆಸಿದರು.
ಕೆನರಾ ಬ್ಯಾಂಕ್ ಎಜಿಎಂ ಜಮೀರ್ ಮಾತನಾಡಿ, ‘ಬ್ಯಾಂಕಿನಲ್ಲಿ ಪ್ರಮುಖರ ಸಭೆ ವೇಳೆ ಗ್ರಾಹಕರಿಗೆ ಒಟ್ಟು ತೂಕದ ಬಂಗಾರಕ್ಕೆ ಸದ್ಯದ ದರದಂತೆ ಹಣ ನೀಡುವುದಾಗಿ ಹೇಳಲಾಗಿತ್ತು. ಅದರಂತೆ ಬ್ಯಾಂಕಿನಿಂದ 22 ಕ್ಯಾರೆಟ್ ಚಿನ್ನದ ದರದ ₹92,050 ಮೊತ್ತದಂತೆ ಆಯಾ ಖಾತೆಗಳಿಗೆ ಹಣ ಹಾಕಿ ಹೋಲ್ಡ್ ನಲ್ಲಿ ಇಡಲಾಗಿದೆ. ಸೆ.1 ರಿಂದ ಎಲ್ಲರಿಗೂ ನೋಟಿಸ್ ಬರಲಿದ್ದು, ಗ್ರಾಹಕರ ಒಪ್ಪಿಗೆ ಇದ್ದರೆ ಸಹಿಪಡೆದು ಖಾತೆಗೆ ಹಣ ಬಿಡುಗಡೆ ಮಾಡುತ್ತೇವೆ, ಸಮ್ಮತಿ ಇಲ್ಲದಿದ್ದರೆ ತಕರಾರು ಅರ್ಜಿ ಪಡೆದು ಅದನ್ನು ಬ್ಯಾಂಕಿಗೆ ಮತ್ತೆ ಮರುಪರಿಶೀಲನೆಗೆ ಕಳುಹಿಸುತ್ತೇವೆ. ನಾವು 24 ಕ್ಯಾರೆಟ್ ದರ ನೀಡುವುದಾಗಿ ಹೇಳಿಲ್ಲ’ ಎಂದರು.
ಇದಕ್ಕೆ ಆಕ್ರೋಶಗೊಂಡ ಧರಣಿನಿರತ ಮುಖಂಡರಾದ ರಾಜುಗೌಡ ಪಾಟೀಲ ಹಾಗೂ ಇತರರು ಮಾತನಾಡಿ, ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ನಮಗೆ 22 ಕ್ಯಾರೆಟ್ ಎಂದು ಹೇಳಿಲ್ಲ, ಟಂಕವು ಸೇರಿ ಬಂಗಾರದ ಒಟ್ಟು ತೂಕಕ್ಕೆ ಈಗಿನ ಮಾರುಕಟ್ಟೆಯ ಬಂಗಾರದ ದರಕ್ಕೆ ಹಣ ನೀಡಲಾಗುವುದು ಎಂದಿದ್ದಕ್ಕೆ ನಾವು ಒಪ್ಪಿಕೊಂಡಿದ್ದೆವು. ನಮಗೆ ಹಣ ಬೇಡ, ನಮ್ಮ ಬಂಗಾರ ನಮಗೆ ಕೊಡಿ ಎಂದು ಒತ್ತಾಯಿಸಿದರು. ಇದಕ್ಕೆ ಧರಣಿನಿರತ ಎಲ್ಲಾ ಗ್ರಾಹಕರು ಧ್ವನಿಗೂಡಿಸಿ, ನಮಗೆ 24 ಕ್ಯಾರೆಟ್ ಚಿನ್ನದ ಇಂದಿನ ದರದಲ್ಲೇ ಹಣ ನೀಡಬೇಕು’ ಎಂದು ಪಟ್ಟು ಹಿಡಿದರು.
ನಂತರ ಕೆನರಾ ಬ್ಯಾಂಕ್ ಎಜಿಎಂ ಜಮೀರ್ ಮೇಲಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಬಳಿಕ ಗ್ರಾಹಕರನ್ನುದ್ದೇಶಿಸಿ ಮಾತನಾಡಿ, ಮೂರ್ನಾಲ್ಕು ದಿನಗಳಲ್ಲಿ ಬೆಂಗಳೂರಿನಿಂದ ಬ್ಯಾಂಕಿನ ಮೇಲಧಿಕಾರಿಗಳು ಮನಗೂಳಿಗೆ ಆಗಮಿಸಲಿದ್ದಾರೆ. ಅವರೊಂದಿಗೆ ಸಭೆ ಸೇರಿ ಗ್ರಾಹಕರ ಎಲ್ಲಾ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವುದು. ಸರಿಪಡಿಸಲು 15 ದಿನಗಳ ಕಾಲಾವಕಾಶ ಬೇಕು ಎಂದರು.
‘ಸಮಸ್ಯೆ ಪರಿಹರಿಸಲು ಬ್ಯಾಂಕ್ ಅಧಿಕಾರಿಗಳು ಸೆ.15ರವರೆಗೂ ಸಮಯ ಕೇಳಿದ್ದಾರೆ. ನಾವು ಗ್ರಾಮಸ್ಥರೊಂದಿಗೆ ಚರ್ಚಿಸಿ ಸೆ.30 ವರೆಗೂ ಸಮಯ ನೀಡಿದ್ದೇವೆ. ಅಷ್ಟರೊಳಗೆ ಬ್ಯಾಂಕಿನವರು ಸಮಸ್ಯೆ ಸರಿಪಡಿಸಿ ಎಲ್ಲಾ ಗ್ರಾಹಕರಿಗೂ 99.5 % ತೂಕದ ಬಂಗಾರ ನೀಡಬೇಕು. ಇಲ್ಲದಿದರೆ ಆ ದಿನದ ಚಿನ್ನದ ದರದಂತೆ ಹಣ ನೀಡಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿ ಬ್ಯಾಂಕಿನಲ್ಲಿರುವ ಖಾತೆ, ಹಣ ಹಿಂಪಡೆದು ಬ್ಯಾಂಕ್ ಬಂದ್ ಮಾಡಲು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಮುಖಂಡರಾದ ರಾಜೇಂದ್ರ ಪಾಟೀಲ, ವಿಶ್ವನಾಥಗೌಡ ಪಾಟೀಲ, ಭಾಗ್ಯರಾಜ್ ಸೊನ್ನದ ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.
ಈ ವೇಳೆ ಮುಖಂಡರಾದ ಯಲ್ಲಪ್ಪ ರೊಳ್ಳಿ, ಸಲೀಂ ಒಂಟಿ, ಜಿ.ಜಿ.ಸಜ್ಜನ, ಪರಶು ಬಿದರಿ, ರೇವಣಸಿದ್ದ ಕೋಟಗೊಂಡ ಸೇರಿದಂತೆ ನೂರಾರು ಗ್ರಾಹಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.