ಆಲಮೇಲ: ತಾಲ್ಲೂಕಿನ ಮೋರಟಗಿ ಗ್ರಾಮವು ಅಂದಾಜು ಎಂಟು ಸಾವಿರ ಜನಸಂಖ್ಯೆಯ ದೊಡ್ಡ ಊರುಗಳಲ್ಲಿ ಒಂದು. ಜಿಲ್ಲಾ ಪಂಚಾಯಿತಿ ಕ್ಷೇತ್ರವು ಹೌದು. ಶೈಕ್ಷಣಿಕವಾಗಿ ಬಹಳಷ್ಟು ಮುಂದುವರೆದಿದೆ ಆದರೂ ಮುಖ್ಯವಾಗಿ ಮೂಲ ಸೌಕರ್ಯಗಳ ಅಗತ್ಯವಿದೆ.
ನಲ್ಲಿ ನೀರಿನ ವ್ಯವಸ್ಥೆ: ‘5 ಮತ್ತು 6ನೇ ವಾರ್ಡ್‌ನ ನಿವಾಸಿಗಳಿಗೆ ಮಾತ್ರ ಮನೆಮನೆಗೂ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆ ಇದೆ. ಉಳಿದ ಐದು ವಾರ್ಡ್‌ಗಳ ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಿಲ್ಲ. ಅವರು ಸಾರ್ವಜನಿಕ ಬಾವಿ ಮತ್ತು ಕೊಳವೆಬಾವಿ ನೀರು ಅವಲಂಬಿಸಿದ್ದು, ದೂರದಿಂದಲೇ ಮನೆಗೆ ನೀರು ಹೊತ್ತು ತರಬೇಕಾಗುತ್ತದೆ, ಇದರಿಂದ ಸಾಕಷ್ಟು ಹೈರಾಣಾಗಿತ್ತಿದ್ದೇವೆ’ ಎಂದು ವಾರ್ಡ್ ನಿವಾಸಿ ವೀರಭದ್ರಪ್ಪ ದೂರಿದರು.
‘ಜಲ ಜೀವನ ಮಿಷನ್ ಅಡಿಯಲ್ಲಿ ಮನೆಮನೆಗೂ ನಲ್ಲಿ ಬರುತ್ತದೆ ಎಂದುಕೊಂಡರೆ ಅದು ಕೂಡಾ, ಟೆಂಡರ್ ಹಿಡಿದವರು ಕೇವಲ ಪೈಪ್‌ಗಳನ್ನು ಹಾಕಿದ್ದಾರೆ ಹೊರತು ಅದನ್ನು ಜೋಡಿಸುವ ಕಾರ್ಯವೂ ಮಾಡಿಲ್ಲ’ ಎಂದು ಆರೋಪಿಸಿದರು.
‘ತಿಪ್ಪೆಯಲ್ಲಿ ಸಂತೆ ಪ್ರತಿ ಮಂಗಳವಾರ ಸಂತೆ ಜರಗುತ್ತದೆ, ಪಕ್ಕದ ಹತ್ತಾರು ಹಳ್ಳಿಗಳ ಜನರೂ ಸಂತೆಗೆ ಬರುತ್ತಾರೆ, ಬಸವಣ್ಣನ ಗುಡಿಗೆ ಹತ್ತಿಕೊಂಡಂತೆ ಸಂತೆ ನೆರವೇರುತ್ತದೆ. ಗಬ್ಬೆದ್ದು ನಾರುವ ಗಲೀಜಿನ ಮಧ್ಯೆಯೇ ಸಂತೆ ಮಾಡುತ್ತಾರೆ, ವ್ಯಾಪಾರಿಗಳು ತಾವು ಮಾಡುವ ಜಾಗ ಸ್ವಚ್ಛಮಾಡಿಕೊಂಡು ಕುಳಿತುಕೊಳ್ಳುತ್ತಾರೆ, ಸಂತೆ ಮುಗಿದರೆ ಮುಗೀತು ಮತ್ತೇ ವಾರದ ವರೆಗೂ ಆ ಕಸ ಎಲ್ಲೆಂದರಲ್ಲಿ ಹರಡಿಕೊಂಡು ಕೊಳೆ ನಿರ್ಮಾಣ ಮಾಡುತ್ತದೆ, ಸಂತೆಕಟ್ಟೆ ನಿರ್ಮಿಸಿ ಸ್ವಚ್ಛತೆ ಕಾಪಾಡಬೇಕು’ ಎಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.
ಐತಿಹಾಸಿಕ ಶಾಲೆ ಕಟ್ಟಡ ಗ್ರಾಮದ ಹಳೆಯ ಕಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ಈಗ ತರಗತಿಗಳು ಇಲ್ಲ, ಓದುವ ವಿದ್ಯಾರ್ಥಿಗಳ ಚಲನವಲನವೂ ಇಲ್ಲ, ಹೀಗಾಗಿ 11 ವಿಶಾಲ ಕೋಣೆಗಳು ಅಕ್ರಮ ತಾಣಗಳಾಗಿ ಪರಿವರ್ತನೆಯಾಗಿವೆ, ಪಕ್ಕದ ಶಾಲೆಗೆ ಈ ಶಾಲೆಯನ್ನು ಜೋಡಿಸಲಾಗಿದೆ ಎನ್ನಲಾಗುತ್ತಿದೆ. 6 ಹಂಚಿನ ಹಾಗೂ 5 ಆರ್‌ಸಿಸಿ ಕೋಣೆಗಳು ಖಾಲಿಯಾಗಿ ಬಣಗುಡುತ್ತಿದ್ದು, ಇಲ್ಲಿ ಬಳಕೆ ಮಾಡುವ ಅಗತ್ಯ ಎದ್ದು ಕಾಣುತ್ತದೆ.
ದುರಸ್ತಿ ಗೆ ಕಾದ ಶುದ್ಧ ಕುಡಿಯುವ ನೀರಿನ ಘಟಕ: ‘ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆರಂಭದಲ್ಲಿ ಕೆಲ ತಿಂಗಳು ಚನ್ನಾಗಿ ನಡೆದಿವೆ. ಈಗ ಬಂದ್ ಆಗಿ ಎರಡು ವರ್ಷ ಮೇಲಾಗಿದೆ., ದುರಸ್ತಿ ಮಾಡಿಸಬೇಕು ಎಂದು ದೂರು ಸಲ್ಲಿಸಿದರೂ ಸಂಬಂಧಿದವರು ಕ್ಯಾರೆ ಎನ್ನುತ್ತಿಲ್ಲ. ಗ್ರಾಮದ ತುಂಬೆಲ್ಲ ಕಸ, ಕೊಳಚೆ, ಮಲೀನ ನೀರು ತುಂಬಿ ಆರೋಗ್ಯ ಕೆಡುತ್ತಿದೆ, ಈ ಎರಡು ಘಟಕಗಳನ್ನು ದುರಸ್ತಿ ಮಾಡಿ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಬೇಕು’ ಎಂದು ಹಾವಣ್ಣ ಕಕ್ಕಳಮೇಲಿ ಆಗ್ರಹಿಸಿದರು.
‘ಹೊಸದಾಗಿ ಎರಡು ಘಟಕಗಳನ್ನು ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ ತಿಳಿಸಿದರು.
ಅಂಗನವಾಡಿಗಳಿಗೆ ಕಟ್ಟಡ ಭಾಗ್ಯ ಬೇಕು: ಗ್ರಾಮದಲ್ಲಿ 6 ಅಂಗನವಾಡಿ ಕೇಂದ್ರಗಳಿದ್ದು, ಕೇವಲ ಒಂದಕ್ಕೆ ಸ್ವಂತ ಕಟ್ಟಡವಿದೆ. ಉಳಿದ 5 ಕೇಂದ್ರಗಳು ಗುಡಿಗುಂಡಾರ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಸೂರು ಕಲ್ಪಿಸಿ ಎಳೆಯಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂಬುದು ಪ್ರಜ್ಞಾವಂತರ ಬಯಕೆ.
ಸ್ಮಶಾನ ಜಾಗದ ಕೊರತೆ: ಲಿಂಗಾಯುತ ಸಮಾಜದವರು ತಮ್ಮ ಹೊಲಗಳಲ್ಲಿ ಸಂಸ್ಕಾರ ಮಾಡುತ್ತಾರೆ, ಸಮರ್ಪಕವಾಗಿ ಕುಡಿಯುವ ನೀರು ವಿತರಣೆ ಮಾಡಬೇಕು, ಸ್ವಚ್ಛತೆಗೆ ಒತ್ತು ಕೊಡುವ ಕಾರ್ಯಕ್ಕೆ ಮುಂದಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.