ADVERTISEMENT

ಮನಸ್ಸು ಅರಳಿಸುವ ಮಕ್ಕಳ ಸಾಹಿತ್ಯ

ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 12:10 IST
Last Updated 6 ಜನವರಿ 2021, 12:10 IST
ವಿಜಯಪುರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಂಬುನಾಥ ಕಂಚ್ಯಾಣಿ ಅವರ ‘ಅವನೆಲ್ಲಿರುವನು ಹೇಳಮ್ಮ’ ಎಂಬ ಮಕ್ಕಳ ಕವನ ಸಂಕಲನವನ್ನು ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು
ವಿಜಯಪುರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಂಬುನಾಥ ಕಂಚ್ಯಾಣಿ ಅವರ ‘ಅವನೆಲ್ಲಿರುವನು ಹೇಳಮ್ಮ’ ಎಂಬ ಮಕ್ಕಳ ಕವನ ಸಂಕಲನವನ್ನು ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು   

ವಿಜಯಪುರ: ಪ್ರೌಢ ಸಾಹಿತ್ಯದಿಂದ ರಾಗ, ದ್ವೇಷಗಳು ಚಿಗುರಿದರೆ, ಮಕ್ಕಳ ಸಾಹಿತ್ಯದಿಂದ ಮನಸ್ಸು ಅರಳುತ್ತದೆ. ಮಕ್ಕಳ ಪುಸ್ತಕವನ್ನು ಓದಿದಾಗ ಸಹೃದಯರಿಗೆ ಆನಂದವುಂಟಾದರೆ ಅದುವೇ ಪ್ರಶಸ್ತಿ ಎಂದು ತಿಳಿಯಬೇಕು. ಇದಕ್ಕಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ ಎಂದು ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಜಂಬುನಾಥ ಕಂಚ್ಯಾಣಿ ಅವರ ‘ಅವನೆಲ್ಲಿರುವನು ಹೇಳಮ್ಮ’ ಎಂಬ ಮಕ್ಕಳ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಯಾವ ಪುಸ್ತಕವನ್ನು ಓದಿದಾಗ ಮಕ್ಕಳಲ್ಲಿ ಕುತೂಹಲವುಂಟಾಗುವುದೋ ಅದೇ ಮಕ್ಕಳ ಸಾಹಿತ್ಯ. ಭಾವನೆಗಳಿಗೆ ಶಬ್ದರೂಪ ಕೊಡುವುದು ಅಪರೂಪದ ಕಲೆಯಾಗಿದೆ. ಅದನ್ನು ಕವಿಗಳು ಮಾಡುತ್ತಾರೆ. ಮನಸ್ಸನ್ನು ವಿಕಸಿಸುವಂತೆ ಮಾಡುವ ಸಾಹಿತ್ಯ ಗ್ರಂಥಗಳು ಆನಂದವನ್ನು ನೀಡುತ್ತವೆ ಎಂದರು.

ADVERTISEMENT

ಉಪಜೀವನಕ್ಕಾಗಿ ವಿಜ್ಞಾನ ಸಾಹಿತ್ಯ ಓದಬೇಕು. ಅಪರೂಪದ ಪುಸ್ತಕಗಳು ಓದುಗರನ್ನು ಭಗವಂತನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತವೆ ಎಂದು ಹೇಳಿದರು.

ಡಾ.ಮಲ್ಲಿಕಾರ್ಜುನ ಮೇತ್ರಿ ಮಾತನಾಡಿ, ಕವಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಸತ್ವಭರಿತ ಕಾವ್ಯ ರಚನೆಗೊಳ್ಳುತ್ತದೆ ಎಂದರು.

ಮಕ್ಕಳ ಸಾಹಿತ್ಯದಲ್ಲಿ ಕಂಡುಬರುವ ಕೆಲವೇ ಗ್ರಂಥಗಳಲ್ಲಿ ‘ಅವನೆಲ್ಲಿರುವನು ಹೇಳಮ್ಮ’ ಒಂದಾಗಿದೆ. ವಿಜಯಪುರ ಜಿಲ್ಲೆಯು ರಾಷ್ಟ್ರಕ್ಕೆ ನೀಡಿದ ಕೊಡುಗೆ ಎಂದರೆ ಮಕ್ಕಳ ಸಾಹಿತ್ಯವಾಗಿದೆ. ಅದನ್ನು ಕೊಟ್ಟವರು ಶಾಲಾ ಮಾಸ್ತರರೆಂದು ಹೇಳಿದರು.

ಡಾ.ಎಂ.ಎಸ್.ಮದಭಾವಿ, ಒತ್ತಾಯದಿಂದ ಪುಸ್ತಕಗಳನ್ನು ಎಳೆದು ತಂದರೆ ಕಾವ್ಯ ಸತ್ವಹೀನವಾಗುತ್ತದೆ. ಕಂಚ್ಯಾಣಿಯವರು ಸಹಜ ಪ್ರಾಸಗಳಿಂದ ಕೂಡಿದ ಪದ್ಯಗಳನ್ನು ರಚಿಸಿ ಮಕ್ಕಳನ್ನು ಮನಸ್ಸನ್ನು ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದರು.

ಡಾ.ವಿ.ಡಿ.ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಎ.ಎಸ್.ಪೂಜಾರ, ಕೆ.ಸುನಂದಾ, ಕಮಲಾಕ್ಷಿ ಗೆಜ್ಜಿ, ಜ್ಯೋತಿ ಗೆಜ್ಜಿ, ಸಿದ್ದಲಿಂಗ ಹದಿಮೂರ, ಬಿ.ಎಂ.ಪಾಟೀಲ, ಬಿ.ಎಚ್. ಬಾದರಬಂಡಿ, ಮ.ಗು.ಯಾದವಾಡ, ಅರವಿಂದ ಕಂಚ್ಯಾಣಿ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಎ.ಬಿ.ಬೂದಿಹಾಳ, ಸುರೇಶ ಅಂಬಲಿ, ಡಾ.ಉಷಾ ಹಿರೇಮಠ, ಎಸ್.ಡಿ. ಕೃಷ್ಣಮೂರ್ತಿ, ಪ್ರೊ.ಸಬರದ, ಅಜ್ಜು ಕಂಚ್ಯಾಣಿ, ಜಗದೀಶ ಸಾಲಹಳ್ಳಿ, ನಟರಾಜ, ದಾನಮ್ಮ, ವೀಣಾ, ಗುರುರಾಜ ಬಾಬಾನಗರ, ರುದ್ರಾಂಬಿಕಾ, ಇಂದುಮತಿ ಸಾಲಿಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.