ADVERTISEMENT

ಕೃಷ್ಣೆಯ ಜಲಧಿಗೆ ಸಿಎಂ ಬಾಗಿನ ಸಮರ್ಪಣೆ ಸೆ.2ಕ್ಕೆ

ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಜಲಧಿ ಭರ್ತಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 5:57 IST
Last Updated 31 ಆಗಸ್ಟ್ 2023, 5:57 IST
ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿ ಚಂದ್ರಗಿರಿಯವರ ನೇತೃತ್ವದಲ್ಲಿ ಅಧಿಕಾರಿಗಳು ಬುಧವಾರ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿರುವುದು
ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿ ಚಂದ್ರಗಿರಿಯವರ ನೇತೃತ್ವದಲ್ಲಿ ಅಧಿಕಾರಿಗಳು ಬುಧವಾರ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿರುವುದು   

ಆಲಮಟ್ಟಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಜಲಧಿ ಭರ್ತಿಯಾಗಿ 15 ದಿನ ಕಳೆದಿವೆ. ಪ್ರತಿ ವರ್ಷದಂತೆ ಈ ವರ್ಷವೂ ಸೆ.2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.

ಮುಖ್ಯಮಂತ್ರಿಗಳ ಪ್ರವಾಸ ಪಟ್ಟಿ ಇನ್ನೂ ಬಂದಿಲ್ಲ. ಆದರೆ ಸೆ.2 ರಂದು ಬಾಗಿನ ಅರ್ಪಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಬಾಗಿನ ಅರ್ಪಣೆಗಾಗಿ ಕೆಬಿಜೆಎನ್ ಎಲ್ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದೆ. 

ಸೆ.2 ರಂದು ಬೆಳಿಗ್ಗೆ 11 ಕೆ ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ಹಾಗೂ ಬಾಗಿನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಎಂ.ಬಿ. ಪಾಟೀಲ, ಆರ್.ಬಿ. ತಿಮ್ಮಾಪುರ ಇರಲಿದ್ದಾರೆ. ಸ್ಥಳೀಯ ಶಾಸಕರು ಆದ, ಜವಳಿ, ಎಪಿಎಂಸಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಶಾಸಕರು, ಸಂಸದರು ಹಾಗೂ ಆಲಮಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಸಭೆ: ಬಾಗಿನ ಅರ್ಪಣೆಯ ನಂತರ ಯುಕೆಪಿ ಹಂತ-3 ರ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸೆ.2 ಮಧ್ಯಾಹ್ನ 12 ಕ್ಕೆ ಇಲ್ಲಿಯ ವ್ಯವಸ್ಥಾಪಕ ನಿರ್ದೇಶಕರ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಪೂರ್ವಭಾವಿ ಸಿದ್ಧತೆ:

ಕೆಬಿಜೆಎನ್ ಎಲ್ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಭರದಿಂದ ಸಿದ್ಧತೆ ನಡೆಸಿದ್ದಾರೆ.

ಜಲಾಶಯದ ಮುಂಭಾಗ, ಪ್ರವಾಸಿ ಮಂದಿರ, ಹೆಲಿಪ್ಯಾಡ್, ಅಣೆಕಟ್ಟು ವೃತ್ತ, ಪೆಟ್ರೋಲ್ ಪಂಪ್ ಬಳಿಯ ದ್ವಾರದ ಬಳಿ ನಾನಾ ಕಾಮಗಾರಿಗಳು, ಪೇಟಿಂಗ್ ಕಾರ್ಯ ಭರದಿಂದ ಸಾಗಿವೆ.

ಈಗಾಗಲೇ ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳಾದ ಡಿ.ಬಸವರಾಜ, ಜೆ.ಜಿ. ರಾಠೋಡ ನೇತೃತ್ವದಲ್ಲಿ. ಕಾರ್ಯನಿರ್ವಾಹಕ ಎಂಜಿನಿಯರ್ ಎಸ್. ಎಸ್ ಡೊಳ್ಳಿ, ರವಿ ಚಂದ್ರಗಿರಿಯವರ, ಯಲಗೂರದಪ್ಪ ಪಟ್ಟಣಶೆಟ್ಟಿ, ವಿಠ್ಠಲ ಜಾಧವ, ಶಂಕ್ರಯ್ಯ ಮಠಪತಿ ಮೊದಲಾದ ಅಧಿಕಾರಿಗಳು ನಾನಾ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ಸೆ.2 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾಗಿನ ಅರ್ಪಿಸುವ ಸಾಧ್ಯತೆ ಹೆಚ್ಚಿದೆ. ಆದಕ್ಕೆ ಅನುಗುಣವಾಗಿ ಕೆಬಿಜೆಎನ್ ಎಲ್ ಅಧಿಕಾರಿಗಳೆಲ್ಲರೂ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಗುರುವಾರದೊಳಗೆ ಪ್ರವಾಸ ಪಟ್ಟಿ ಬರುವ ನಿರೀಕ್ಷೆಯಿದೆ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ.ಬಸವರಾಜ ಪ್ರಜಾವಾಣಿಗೆ ಮಾಹಿತಿ ನೀಡಿದರು.

ಜಲಾಶಯದ ಮಟ್ಟವೂ ಕುಸಿತ ಆಲಮಟ್ಟಿ ಜಲಾಶಯದ ಒಳಹರಿವು ಕಳೆದ 10 ದಿನದಿಂದ ಸಂಪೂರ್ಣ ಸ್ಥಗಿತವಾಗಿದೆ. 519.60 ಮೀ. ಗರಿಷ್ಠ ಎತ್ತರದಲ್ಲಿ 519.53 ಮೀ ಎತ್ತರದ ವರೆಗೆ ನೀರು ಸಂಗ್ರಹಣೆಗೊಂಡಿದ್ದು ಜಲಾಶಯದಲ್ಲಿ 121.782 ಟಿಎಂಸಿ ಅಡಿ ನೀರು ಸಂಗ್ರಹವಿದೆ. ನೀರಾವರಿಗಾಗಿ ಜಲಾಶಯದ ಹಿನ್ನೀರಿನ ಬಳಕೆಯಿಂದಾಗಿ 827 ಕ್ಯುಸೆಕ್ ನೀರು ಹೊರಹೋಗುತ್ತಿದೆ. ಮಹಾರಾಷ್ಟ್ರದಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿಯೂ ಮಳೆ ಬಹುತೇಕ ಸ್ಥಗಿತಗೊಂಡಿದೆ. ಅಲ್ಲಿಯ ಜಲಾಶಯದಲ್ಲಿಯೂ ಒಳಹರಿವು ಬಹುತೇಕ ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಭರ್ತಿಯಾಗಿರುವ ಆಲಮಟ್ಟಿ ಜಲಾಶಯದ ಒಳಹರಿವು ಸ್ಥಗಿತಗೊಂಡಿದ್ದು ಕ್ರಮೇಣ ನೀರಾವರಿಗೆ ನೀರು ಬಳಕೆಯಾಗುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.