ADVERTISEMENT

ಕೋವಿಡ್ ಸೋಂಕಿತ ಗ್ರಾಮೀಣರ ಪತ್ತೆಗೆ ಸಿಎಂ ಸೂಚನೆ

ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೊ ಸಂವಾದ

​ಪ್ರಜಾವಾಣಿ ವಾರ್ತೆ
Published 29 ಮೇ 2021, 13:33 IST
Last Updated 29 ಮೇ 2021, 13:33 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ವಿಡಿಯೊ ಸಂವಾದದ ಮೂಲಕ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ವಿಡಿಯೊ ಸಂವಾದದ ಮೂಲಕ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು   

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರನ್ನು ಆದ್ಯತೆ ಮೇಲೆ ಗುರುತಿಸಬೇಕು. ಸಕಾಲಕ್ಕೆ ಅಂತಹವರಿಗೆ ಚಿಕಿತ್ಸೆ ಒದಗಿಸುವ ಮೂಲಕ ಮರಣ ಪ್ರಮಾಣ ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.

ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆಶನಿವಾರ ವಿಡಿಯೊ ಸಂವಾದದ ಮೂಲಕ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಎರಡನೇ ಅಲೆ ತೀವ್ರವಾಗಿ ಬಾಧಿಸಿದೆ. ಕೋವಿಡ್ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ. ಇದಕ್ಕಾಗಿ ಶ್ರಮಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಅವರು ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬರುತ್ತಿರುವುದರಿಂದ ಹೆಚ್ಚಿನ ಗಮನ ನೀಡಬೇಕು. ಹೋಂ ಐಸೋಲೇಶನ್, ಕೋವಿಡ್ ಕೇರ್ ಸೆಂಟರ್‌ಗೆ ಹಾಗೂ ಕೋವಿಡ್ ಆಸ್ಪತ್ರೆಗಳಿಗೆ ರೋಗಿಗಳನ್ನು ಸಕಾಲಕ್ಕೆ ಚಿಕಿತ್ಸೆಗೆ ಒಳಪಡಿಸಿ ಮರಣ ಪ್ರಮಾಣ ಕಡಿಮೆಗೊಳಿಸಬೇಕು. ಆಯಾ ಜಿಲ್ಲೆಯ ಆಸ್ಪತ್ರೆಗಳಲ್ಲಿ ನಿಗದಿತ ಔಷಧ, ಆಮ್ಲಜನಕ, ಇತರೆ ಉಪಕರಣಗಳು ಹಾಗೂ ಸಂಪನ್ಮೂಲಗಳ ಸಮರ್ಪಕವಾಗಿ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ (ಕಪ್ಪು ಶಿಲೀಂದ್ರ) ರೋಗಿಗಳಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲು ನಿಗದಿತ ಸೌಲಭ್ಯ ಇಲ್ಲದಿರುವ ಬಗ್ಗೆ ಹಾಗೂ ಅಂತಹ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಿದರೂ ಕೂಡ ಔಷಧ ಕೊರತೆ ಇರುವುದಾಗಿ ಗಮನಕ್ಕೆ ತಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 100 ಬ್ಲ್ಯಾಕ್ ಫಂಗಸ್ ರೋಗಿಗಳಿದ್ದಾರೆ. ರಾಜ್ಯದಲ್ಲಿ ಅಂದಾಜು 3 ಸಾವಿರ ಇಂತಹ ರೋಗಿಗಳು ಇರುವ ಬಗ್ಗೆ ಅಂದಾಜಿಸಲಾಗಿದ್ದು, ಪ್ರತಿದಿನ 15 ಸಾವಿರ ಪ್ರತಿರೋಧಕ ಫಂಗಸ್‌ ಇಂಜೆಕ್ಷನ್‌ಗಳ ಬೇಡಿಕೆ ಇರುವುದರಿಂದ ಈ ಕುರಿತು ವಿಶೇಷ ಗಮನಹರಿಸಬೇಕು ಎಂದರು.

ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಅಂಕಿಅಂಶ ಆಧಾರದ ಮೇಲೆ ಕೋವಿಡ್‌ಗೆ ನಿಗದಿತ ಔಷಧ ಪೂರೈಸಬೇಕು ಎಂದರು.

ಶಾಸಕ ಎಂ.ಬಿ. ಪಾಟೀಲ, ಬ್ಲ್ಯಾಕ್ ಫಂಗಸ್ ರೋಗಿಗಳ ಅನುಕೂಲಕ್ಕಾಗಿ ತಾಂತ್ರಿಕ ಸಮಿತಿಗಳ ಮೂಲಕ ಸೂಕ್ತ ಮಾರ್ಗದರ್ಶನವನ್ನು ಚಿಕಿತ್ಸಾ ಸಂದರ್ಭದಲ್ಲಿ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ನೀಡಿ ಸಾವುಗಳನ್ನು ತಪ್ಪಿಸಲು ನೆರವಾಗುವಂತೆ ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆರೋಗ್ಯ ಇಲಾಖೆ ಅತ್ಯುತ್ತಮ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಶಾಸಕ ಯಶವಂತರಾಯಗೌಡ ಪಾಟೀಲ, ಮುಂದಿನ ಆಯವ್ಯಯದಲ್ಲಿ ಜನರ ಜೀವ ರಕ್ಷಣೆಗಾಗಿ ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಜಲಧಾರೆ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಈ ಭಾಗದಲ್ಲಿ ನೀರಿನ ಶಾಶ್ವತ ಪರಿಹಾರಕ್ಕೆ ನಿರ್ಣಯ ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ ರೂ.1.5 ಕೋಟಿ ಬಿಡುಗಡೆಗೆ ಕೋರಿದರು. ಶಾಸಕರ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಯವರು, ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಅರುಣ ಶಹಾಪುರ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ ಸಭೆಯಲ್ಲಿ ಉಪಸ್ಥಿತರಿದ್ದರು.

ಕೋವಿಡ್‌ನಿಂದಾಗಿ ಹಲವು ಕುಟುಂಬಗಳಲ್ಲಿ ಮಧ್ಯೆ ವಯಸ್ಕ ಸದಸ್ಯರು ಸಾವನ್ನಪ್ಪಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಂತಹ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು

–ಯಶವಂತರಾಯಗೌಡ ಪಾಟೀಲ, ಶಾಸಕ, ಇಂಡಿ

ಕೋವಿಡ್ ನಂತರ ಬ್ಲ್ಯಾಕ್ ಫಂಗಸ್‌ನಿಂದ ಹೆಚ್ಚಿಗೆ ಸಾವು ಆಗುತ್ತಿದೆ. ಕಾರಣ ಬ್ಲ್ಯಾಕ್ ಫಂಗಸ್ ರೋಗಿಗಳ ಅನುಕೂಲಕ್ಕಾಗಿ ನಿಗದಿತ ಔಷಧ, ಲಸಿಕೆಯನ್ನು ಆದ್ಯತೆ ಮೇಲೆ ಪೂರೈಸಬೇಕು

–ಎಂ.ಬಿ. ಪಾಟೀಲ,ಶಾಸಕ, ಬಬಲೇಶ್ವರ

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ನಾನು ಸಚಿವನಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಹೆಚ್ಚುವರಿ ನಿರ್ದೇಶಕರ ನೇಮಕ ಮಾಡಲಾಗಿತ್ತು. ಈಗ ಪುನಃ ಬೆಂಗಳೂರಿಗೆ ಅವರನ್ನು ಪಡೆದಿರುವುದರಿಂದ ಈ ಕುರಿತು ಗಮನಹರಿಸಬೇಕು.

–ಶಿವಾನಂದ ಪಾಟೀಲ, ಶಾಸಕ, ಬಸವನ ಬಾಗೇವಾಡಿ

ಬಡ ವರ್ಗಗಳಿಗೆ ಸರ್ಕಾರ ಘೋಷಿಸಿದ ಪ್ಯಾಕೇಜ್‌ನಲ್ಲಿ ಕೆಲವು ವರ್ಗಗಳು ಕೈಬಿಟ್ಟಿದ್ದು, ಅವುಗಳ ಕುರಿತು ಕ್ರಮ ಕೈಗೊಳ್ಳಬೇಕು

ಎಸ್.ಆರ್.ಪಾಟೀಲ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ಮುದ್ದೇಬಿಹಾಳಕ್ಕೆ 20 ಆಕ್ಸಿಜನ್ ಕಾನ್ಸನ್‌ಟ್ರೇಟರ್, ತಾಳಿಕೋಟೆಯಲ್ಲಿ ಆಕ್ಸಿಜನ್ ಸೆಂಟರ್, 150 ಜಂಬೊ ಸಿಲಿಂಡರ್, 10 ಐ.ಸಿ.ಯು ಬೆಡ್ ಮಂಜೂರು ಮಾಡಬೇಕು

–ಎ.ಎಸ್‌.ಪಾಟೀಲ ನಡಹಳ್ಳಿ, ಶಾಸಕ ಮುದ್ದೇಬಿಹಾಳ

ವಿಜಯಪುರ ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ಕಾಮಗಾರಿಗಳು ನಡೆದಿವೆ. ಈ ಕುರಿತು ಇಬ್ಬರು ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದು, ಆಸ್ಪತ್ರೆಯ ಇತರ ಚಟುವಟಿಕೆಗಳು ಸಹ ಕೈಗೊಳ್ಳುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ

–ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.