ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ; ದೂರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 9:52 IST
Last Updated 9 ನವೆಂಬರ್ 2019, 9:52 IST

ವಿಜಯಪುರ: ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2007-08ನೇ ಸಾಲಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹೆಣ್ಣು ಮಕ್ಕಳ ವಸತಿ ಆಶ್ರಯ ಯೋಜನೆಯಡಿ ಭೂ ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಆಲಮಟ್ಟಿ ಆರ್‌ಟಿಐ ಕಾರ್ಯಕರ್ತ ಪ್ರವೀಣಕುಮಾರ ವಾಲೀಕಾರ ಅವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರುನೀಡಿದ್ದಾರೆ.

ದೂರಿನ ಪ್ರತಿಯನ್ನು ಸುದ್ದಿಗಾರರಿಗೆ ನೀಡಿರುವ ಅವರು, 2007-08ನೇ ಸಾಲಿನ ಸಂತ್ರಸ್ತರ ವಸತಿ ಆಶ್ರಯ ಯೋಜನೆಯಡಿ ಆಲಮಟ್ಟಿ ಗ್ರಾಮ ಪಂಚಾಯಿತಿಯ ಅಂದಿನ ಕಾರ್ಯದರ್ಶಿ ತೋಳನೂರ ಅವರು, ಚಿಮ್ಮಲಗಿ ಭಾಗ-1ಎ ಪುನರ್ವಸತಿ ಕೇಂದ್ರದಲ್ಲಿ ಕಾಯ್ದಿರಿ ಸಿದ ಜಾಗದಲ್ಲಿ 30 ಸಂತ್ರಸ್ತ ಹೆಣ್ಣು ಮಕ್ಕಳಿಗೆ ಹಕ್ಕುಪತ್ರಗಳನ್ನು ಅಕ್ರಮವಾಗಿ ವಿತರಣೆ ಮಾಡಿದ್ದಾರೆ. ಆಗ ಕೈಗೊಂಡ ಠರಾವು ನಕಲಿ ಯಾಗಿದೆ.

ಇಲ್ಲಿ ಹೆಣ್ಣು ಮಕ್ಕಳ ಬದಲಾಗಿ ಗಂಡುಮಕ್ಕಳ ಹೆಸರಿನಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಅಲ್ಲದೇ, ಒಂದೇ ಕುಟುಂಬದಲ್ಲಿ ಇಬ್ಬರು, ಮೂವರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಕೃಷ್ಣಾ ನದಿ ಹಿನ್ನೀರಿನ ನೈಜ ಸಂತ್ರಸ್ತರಿಗೆ ವಿತರಿಸಬೇಕಾದ ನಿವೇಶನಗಳನ್ನು ಸಂತ್ರಸ್ತರಲ್ಲದ ಶಕುಂತಲಾ ಲಮಾಣಿ, ಅನಿತಾ ಲಮಾಣಿ, ಮಾಯಾವತಿ ಜಿಲ್ಲೆ, ಹೇಮಾ ಚವ್ಹಾಣ, ಬೇಬಿಜಾನ್ ರಾಜೇಸಾಬ್ ನದಾಫ್, ಗಂಗಾಬಾಯಿ ಶಿಗ್ಗಾವಿ, ದಾನಾಬಾಯಿ ಲಮಾಣಿ, ಅಲಿಬಾಯಿ ಹೊನವಾಡ, ಗೀತಾ ಲಮಾಣಿ, ಶರೀಫಾ ಬುಡ್ಡೇಸಾಬ ನದಾಫ್, ರೂಪಾ ಚವ್ಹಾಣ, ಲಕ್ಷ್ಮಿ ಚವ್ಹಾಣ, ಹೀರಾಬಾಯಿ ನಾಯಕ, ಕಾವೇರಿ ನಾಯಕ, ವೀಣಾ ರಜಪೂತ, ಲೀಲಾ ಚವ್ಹಾಣ, ಕವಿತಾ ರಜಪೂತ ಹಾಗೂ ಲಲಿತಾ ಲಮಾಣಿ ಸೇರಿದಂತೆ 17 ಜನರಿಗೆ ವಿತರಿಸಲಾಗಿದೆ. ಆದರೆ, ಇವರಾರೂ ನೈಜ ಸಂತ್ರಸ್ತರಲ್ಲ ಎಂದು ಆರೋಪಿಸಿದ್ದಾರೆ.

ಇವರೆಲ್ಲರೂ ನಕಲಿ ದಾಖಲೆ ಸೃಷ್ಟಿಸಿ ಹಕ್ಕುಪತ್ರ ಪಡೆದುಕೊಂಡಿದ್ದಾರೆ. ಈ ಹಗರಣದ ರೂವಾರಿಗಳಾದ ಗ್ರಾಮ ಪಂಚಾಯಿತಿ ಅಂದಿನ ಕಾರ್ಯದರ್ಶಿ ಹಾಗೂ ಕೆಲ ಏಜೆಂಟ್‌ರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನೈಜ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.