ADVERTISEMENT

ದೌರ್ಜನ್ಯ ಖಂಡಿಸಿ ಪ್ರತಿಭಟನಾ ಜಾಥಾ ಮಾ.8ಕ್ಕೆ

ರೌಡಿ ಶೀಟರ್‌ ಪಟ್ಟಿಗೆ ದಲಿತ ಮುಖಂಡರ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:00 IST
Last Updated 3 ಮಾರ್ಚ್ 2021, 13:00 IST

ವಿಜಯಪುರ: ಪರಿಶಿಷ್ಟ ಜಾತಿಯ ಜನರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಮುಖಂಡ ಜಿತೇಂದ್ರ ಕಾಂಬಳೆ ಅವರ ಮೇಲಿನ ಸುಳ್ಳು ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ಮಾರ್ಚ್‌ 8ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12ಕ್ಕೆ ನಗರದ ಸಿದ್ಧೇಶ್ವರ ಗುಡಿಯಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ವರೆಗೆ ಪ್ರತಿಭಟನಾ ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಹತ್ಯೆ, ಕೊಲೆಗಳು ವ್ಯಾಪಾಕವಾಗಿ ನಡೆಯುತ್ತಿವೆ. ಆದರೆ, ಇಲ್ಲಿನ ಪೊಲೀಸ್‌ ಅಧಿಕಾರಿಗಳು ದೌರ್ಜನ್ಯ ಕೊಲೆ ತಡೆಯುವಲ್ಲಿ ವಿಫಲವಾಗಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.

ADVERTISEMENT

ದಲಿತ ಮುಖಂಡ ಜಿತೇಂದ್ರ ಕಾಂಬಳೆ ಮೇಲೆ ಸುಳ್ಳು ಕೇಸು ದಾಖಲಿಸಿಕೊಂಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಬಳೆ ವಿರುದ್ಧ ದಾಖಲಾಗಿರುವ ಸುಳ್ಳು ಕೇಸು ದಾಖಲಾಗಿರುವ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯಗಳ ಪ್ರತಿಬಂಧಕ ಕಾಯ್ದೆ–1989 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಪರಿಶಿಷ್ಟ ಜಾತಿಗೆ ಸೇರಿದವರನ್ನು ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಜಾಥಾದಲ್ಲಿ ಮುಖಂಡರಾದ ಮಾವಳ್ಳಿ ಶಂಕರ್‌, ಸಿದ್ದಾರ್ಥ ಶ್ರೀನಿವಾಸ, ಇಂದಿರಾ ಕೃಷ್ಣಪ್ಪ ಸಿದ್ದಪ್ಪ ಕಾಂಬಳೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಮುಖಂಡರಾದ ಅರ್ಜುನ ಗೊಬ್ಬೂರ, ಜಿತೇಂದ್ರ ಕಾಂಬಳೆ, ರಾಮಣ್ಣ ಕಲ್ಲದೇವನಹಳ್ಳಿ, ಲಕ್ಷ್ಮಣ ದೊಡ್ಮನಿ, ಸಂಜು ಕೆಂಬಾಗಿ, ಸಂಕರ ಚಲವಾದಿ, ಮಹೇಂತೇಶ ರಾಠೋಡ, ಹುಚ್ಚಪ್ಪ ಲೋಕೋರ ಪತ್ರಿಕಾಗೋಷ್ಠಿಯಲ್ಲಿ ಇದ್ದಾರೆ.

***

ಸುಳ್ಳು ಕೇಸು ತೆಗೆದುಹಾಕಲು ಆಗ್ರಹ

ವಿಜಯಪುರ: ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡರಾದ ವೈ.ಸಿ.ಮಯೂರ ಮತ್ತು ಜಿತೇಂದ್ರ ಕಾಂಬಳೆ ಅವರ ವಿರುದ್ಧ ದಾಖಲಾಗಿರುವ ಸುಳ್ಳು ಕೇಸುಗಳನ್ನು ತೆಗೆದುಹಾಕಲು ಆಗ್ರಹಿಸಿ ಮಾರ್ಚ್‌ 10ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12ಕ್ಕೆ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್‌ ಜಾಥಾ ನಡೆಸಲಾಗುವುದು ಎಂದರು.

ಜಿಲ್ಲೆಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅದೇ ಠಾಣಾ ವ್ಯಾಪ್ತಿಯ ಹಳ್ಳಿಯ ಪೊಲೀಸರನ್ನು ಅಂತರ್‌ ಜಿಲ್ಲೆಗೆ ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿದರು.‌

ಮುಖಂಡರಾದ ವಿನಾಯಕ ಗುಣಸಾಗರ, ರಮೇಶ ಆಸಂಗಿ, ವೈ.ಸಿ.ಮಯೂರ, ಶರಣು ಶಿಂಧೆ, ರಮೇಶ ದರಣಕರ, ಅಶೋಕ ಚಲವಾದಿ, ಸಿದ್ದು ರಾಯಣ್ಣವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ದಲಿತ ಸಂಘರ್ಷ ಸಮಿತಿಯ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ, ರೌಡಿ ಶೀಟರ್‌ ಪಟ್ಟಿಗೆ ಸೇರಿಸಿ ಜೈಲಿಗೆ ತಳ್ಳಿರುವ ಕ್ರಮ ಖಂಡನೀಯ

ಡಾ.ಡಿ.ಜಿ.ಸಾಗರ್,ರಾಜ್ಯ ಸಂಚಾಲಕ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.