ADVERTISEMENT

ವಿಜಯಪುರ |ಪಿಎಸ್ಐ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಿ: ಡಿಸಿ ಸೂಚನೆ

ಜಿಲ್ಲೆಯ 11 ಕೇಂದ್ರಗಳಲ್ಲಿ ಅಕ್ಟೋಬರ್ 3ರಂದು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 14:40 IST
Last Updated 1 ಅಕ್ಟೋಬರ್ 2024, 14:40 IST
ವಿಜಯಪುರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಪಿ.ಎಸ್.ಐ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಪೊಲೀಸ್ ವರಿಷ್ಠಾಧಿಖಾರಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪಾಲ್ಗೊಂಡಿದ್ದರು
ವಿಜಯಪುರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಪಿ.ಎಸ್.ಐ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಪೊಲೀಸ್ ವರಿಷ್ಠಾಧಿಖಾರಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪಾಲ್ಗೊಂಡಿದ್ದರು   

ವಿಜಯಪುರ: ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯು ಜಿಲ್ಲೆಯ ಒಟ್ಟು 11 ಕೇಂದ್ರಗಳಲ್ಲಿ ಅಕ್ಟೋಬರ್ 3ರಂದು ಜರುಗಲಿದ್ದು, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಪಿ.ಎಸ್.ಐ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಒಟ್ಟು 4,920 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಿಗ್ಗೆ 10.30ರಿಂದ 12ರ ವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 12-30ರಿಂದ ಮಧ್ಯಾಹ್ನ 2 ರವರೆಗೆ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿವೆ’ ಎಂದರು.

ADVERTISEMENT

‘ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಪೋನ್ ಇನ್ನಿತರ ಉಪಕರಣ ಬಳಸದಿರುವ ಬಗ್ಗೆ ತಪಾಸಣೆ ನಡೆಸಬೇಕು. ಪರೀಕ್ಷಾ ಹಿಂದಿನ ದಿನ ಸಿಸಿಟಿವಿ ಕ್ಯಾಮೆರಾ, ಬಾಡಿ ಕ್ಯಾಮೆರಾ, ಪ್ರಿಸ್ಕಿಂಗ್, ಮುಖ ಚಹರೆ ಮತ್ತು ಜಾಮರ್‌ಗಳನ್ನು ಉಪ ಪರೀಕ್ಷಾ ಕೇಂದ್ರದ ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸುವುದು, ಪರೀಕ್ಷಾ ದಿನದಂದು ಅವುಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿಕೊಳ್ಳಬೇಕು. ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ವೀಕ್ಷಣೆಗೆ ಅನುಕೂಲವಾಗುವಂತೆ ದೃಶ್ಯಾವಳಿ ವೀಕ್ಷಿಸಲು ಮಾನಿಟರ್ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಬೇಕು’ ಎಂದರು.

‘ಪರೀಕ್ಷಾ ಕೊಠಡಿಗಳಲ್ಲಿ ಸಾಕಷ್ಟು ಗಾಳಿ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ  ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಪರೀಕ್ಷೆಗಳಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು ಲೋಪ ಕಂಡು ಬಂದಲ್ಲಿ ತಪ್ಪಿಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಯಾವುದೇ ಕಾರಣಕ್ಕೂ ತಮಗೆ ವಹಿಸಿದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅಭ್ಯರ್ಥಿಗಳ ಗುರುತಿನ ಚೀಟಿ ತಪಾಸಣೆ ನಡೆಸಿ ಖಚಿತಪಡಿಸಿಕೊಳ್ಳಬೇಕು. ಮಹಿಳಾ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಬೇಕು.  ಮೊಬೈಲ್, ಕ್ಯಾಲುಕುಲೇಟರ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸದೇ ಇರುವುದು ಖಚಿತ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕೃತವಾಗಿ ನೇಮಕವಾದ ಸಿಬ್ಬಂದಿಗಳಿಗೆ ಮಾತ್ರ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ಅವರು ಗುರುತಿನ ಚೀಟಿ ಹೊಂದಿರಬೇಕು. ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ  ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. 

ಪೊಲೀಸ್ ವರಿಷ್ಠಾಧಿಖಾರಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ,  ಖಜಾನೆ ಇಲಾಖೆಯ ಉಪನಿರ್ದೇಶಕ ಹಣಮಂತ ಕಾಲತಿಪ್ಪಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ, ಮಾರ್ಗಾಧಿಕಾರಿಗಳು, ಅಧೀಕ್ಷಕರು, ಸ್ಥಾನಿಕ ನಿರೀಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ವೀಕ್ಷಕರು ಉಪಸ್ಥಿತರಿದ್ದರು.

ನಿಷೇಧಾಜ್ಞೆ ಜಾರಿ ವಿಜಯಪುರ ಜಿಲ್ಲೆಯ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಅಕ್ಟೋಬರ್ 3ರಂದು ನಡೆಯುವ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಪಿಎಸ್‍ಐ) ಪರೀಕ್ಷೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ. ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಸಿಬ್ಬಂದಿ ಮತ್ತು ಇತರರು ಯಾವುದೇ ತರಹದ ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ಮಾರ್ಟ್‌ ಮೊಬೈಲ್ ಫೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಿದೆ. ಪರೀಕ್ಷೆ ನಡೆಯುವ ದಿನಗಳಂದು ಬೆಳಿಗ್ಗೆ 8.30 ರಿಂದ ಪರೀಕ್ಷೆ ಮುಗಿಯುವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದು ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು ಕಂಪ್ಯೂಟರ್ ಸೆಂಟರ್‌ಗಳು ಸೈಬರ್ ಕೆಫೆಗಳು ಕೋಚಿಂಗ್ ಕೇಂದ್ರಗಳನ್ನು ಪರೀಕ್ಷೆ ನಡೆಯುವ ಅವಧಿಯಲ್ಲಿ ತೆರೆಯದಂತೆ ಆದೇಶಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.