ADVERTISEMENT

ಅಪರಾಧ ಮುಕ್ತ ಕ್ಷೇತ್ರವನ್ನಾಗಿಸಲು ಕ್ರಮ

ಅಭಿನಂದನಾ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 13:16 IST
Last Updated 24 ಜೂನ್ 2018, 13:16 IST
ಶಾಸಕ ಯಶವಂತರಾಯಗೌಡ ಪಾಟೀಲ ಭಾನುವಾರ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಭಾನುವಾರ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.   

ಇಂಡಿ: ‘ಇಂಡಿ ಮತಕ್ಷೇತ್ರವನ್ನು ಅಪರಾಧ ಮುಕ್ತ ಮತಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗ ಮಹಾರಾಜರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ‘ರಾಜ್ಯದಲ್ಲಿ ಭೀಮಾ ತೀರದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಮತ್ತು ತಾಲ್ಲೂಕಿನ ವಿವಿಧ ಸಮುದಾಯಗಳಲ್ಲಿ ಸೌಹಾರ್ದ ಕಲ್ಪಿಸಲು ಪಣ ತೊಟ್ಟಿದ್ದೇನೆ’ ಎಂದರು.

ಮುಂಬರುವ 3 ತಿಂಗಳಲ್ಲಿ ಮರಗೂರ ಗ್ರಾಮದ ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ಆಡಳಿತ ಮಂಡಳಿಯ ಚುನಾವಣೆ ನಡೆಸಿ, ಅದಕ್ಕೆ ಅರ್ಹರನ್ನು ಆಯ್ಕೆ ಮಾಡಿ ಜಿಲ್ಲೆಯಲ್ಲಿಯೇ ಒಂದು ಉತ್ತಮವಾದ ಸಕ್ಕರೆ ಕಾರ್ಖಾನೆಯನ್ನಾಗಿ ರೂಪಿಸುತ್ತೇನೆ. ಕಾರ್ಖಾನೆ ರೈತರ ಆಸ್ತಿಯಾಗಿದ್ದು, ಆ ಆಸ್ತಿಯ ಮೇಲೆ ₹ 150 ಕೋಟಿ ಸಾಲವಿದೆ. ಕಾರ್ಖಾನೆಯ ಮತ್ತು ರೈತರ ಬಗ್ಗೆ ಕಾಳಜಿ ಇದ್ದವರನ್ನು ನಿರ್ದೇಶಕರನ್ನಾಗಿ ಮಾಡಲಾಗುವುದು ಎಂದರು.

ADVERTISEMENT

‘ಒಂದು ವರ್ಷದಲ್ಲಿ ಇಂಡಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಮತ್ತು ಇಪ್ಪನ್ಕಾಲು ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುವ ಭೀಮಾ ನದಿ ನೀರು ಸರಬರಾಜು ಯೋಜನೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಸರ್ಕಾರ ₹ 93.47 ಕೋಟಿ ಅನುದಾನ ನೀಡಿದೆ. ಇಷ್ಟರಲ್ಲಿಯೇ ಆ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಇಂಡಿ ಪುರಸಭೆಯನ್ನು ನಗರ ಸಭೆಯನ್ನಾಗಿ ಮಾಡಲಾಗುವದು. ಅದಕ್ಕೆ ಅಗತ್ಯವಿದ್ದ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದ ಅವರು ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೊನಿಗಳಲ್ಲಿ ಸಮುದಾಯ ಭವನ, ಕುಡಿಯುವ ನೀರು ಮತ್ತು ರಸ್ತೆಗಳನ್ನು ಮಾಡಲಾಗುವುದು’ ಎಂದರು.

‘ಹೊರ್ತಿ ಪಟ್ಟಣಕ್ಕೆ ಕುಡಿಯುವ ನೀರು, ಕೃಷ್ಣಾ ಕೊಳ್ಳದಿಂದ ಹೆಚ್ಚುವರಿಯಾಗಿ 4.5 ಟಿಎಂಸಿ ನೀರು ಬಳಕೆ ಮಾಡಿಕೊಂಡು ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ 88 ಸಾವಿರ ಎಕರೆ ನೀರಾವರಿ ಮಾಡುವ ಬಗ್ಗೆ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದರ ಜೊತೆಗೆ ಕೆರೆ ತುಂಬುವ ಕೆಲಸ ಪೂರ್ಣಗಳಿಸಲು ಕ್ರಮ ಕೈಕೊಳ್ಳಲಾಗುವುದು’ ಎಂದರು.

ಅಣ್ಣಪ್ಪ ಬಿದರಕೋಟಿ, ಪುತಳಾಬಾಯಿ ಬಿರಾದಾರ, ಹಣಮಂತ ಮುಜಗೊಂಡ, ಸದಾಶಿವ ಪ್ಯಾಟಿ, ಪ್ರಕಾಶ ವಾಲಿ, ಶ್ರೀಕಾಂತ ಕುಡಿಗನೂರ, ಸುರೇಶ ಶಿವೂರ, ಅರವಿಂದಗೌಡ ಬಿರಾದಾರ, ರಮೇಶಗೌಡ ಬಿರಾದಾರ, ಚಂದುಸಾಹುಕಾರ ಗುಬ್ಬೇವಾಡ, ಎ.ಪಿ.ಕಾಗವಾಡಕರ, ಅಶೋಕಗೌಡ ಪಾಟೀಲ, ಪಾಂಡುರಂಗ ಕುಲಕರ್ಣಿ, ಎಂ.ಕೆ.ಬಿರಾದಾರ ಉಪಸ್ಥಿತರಿದ್ದರು. ದುಂಡು ಮುಜಗೊಂಡ ನಿರೂಪಿಸಿದರು. ಎ.ಪಿ.ಕಾಗವಾಡಕರ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.