ADVERTISEMENT

ಕಾಂಗ್ರೆಸ್ ಲಿಂಗಾಯತ ವಿರೋಧಿಯಲ್ಲ: ಗುರುರಾಜ್ ಗಡೇದ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:47 IST
Last Updated 20 ಜುಲೈ 2024, 13:47 IST
<div class="paragraphs"><p>ಗುರುರಾಜ್ ಗಡೇದ</p></div>

ಗುರುರಾಜ್ ಗಡೇದ

   

ದೇವರಹಿಪ್ಪರಗಿ: ‘ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಲಿಂಗಾಯತ ವಿರೋಧಿಯಲ್ಲ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್ ಗಡೇದ ಹೇಳಿದ್ದಾರೆ.

‘ಪಟ್ಟಣ ಪಂಚಾಯಿತಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಆರೋಪಿಸಿದಂತೆ ಕಾಂಗ್ರೆಸ್ ಯಾರಿಗೂ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ತಂದಿದೆ. ಜಿಲ್ಲೆಯಲ್ಲಿ ಎಲ್ಲ ವರ್ಗದವರಿಗೂ ಅಧಿಕಾರ ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರ ಆದಿಯಾಗಿ ಐದು ಜನ ಲಿಂಗಾಯತ ಶಾಸಕರಿರುವುದೇ ನಿದರ್ಶನ. ಇನ್ನೂ ಕ್ಷೇತ್ರದ ಇಬ್ಬರು ಮುಖಂಡರು ಕೆಪಿಸಿಸಿ ಪ್ರಧಾನಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದು, ಬಹುತೇಕ ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತರಿಗೆ ಅವಕಾಶ ನೀಡಲಾಗಿದೆ. ಅದರಂತೆ ಹಲವಾರು ಹುದ್ದೆಗಳಿಗೆ ನಾಮ ನಿರ್ದೇಶನ ಮಾಡುವಾಗಲೂ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಲಾಗಿದೆ’ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಉಸ್ತುವಾರಿ ಸಂಚಾಲಕನಾಗಿ ಕಾರ್ಯ ನಿರ್ವಹಿರುವ ನನಗೆ ಯಾವುದೇ ಭೇದಭಾವ ಕಂಡು ಬಂದಿಲ್ಲ. ಆದರೆ ಬಿಜೆಪಿಯೇ ಭೇದಭಾವ ನೀತಿ ಅನುಸರಿಸಿದ್ದು, ಅವರ ಅಧಿಕಾರವಧಿಯಲ್ಲಿ ಲಿಂಗಾಯತರು, ಒಕ್ಕಲಿಗರನ್ನು ಬಿಟ್ಟು ಯಾರಿಗೆ ಅಧಿಕಾರ ನೀಡಲಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಈಗ ನಮ್ಮ ಸರ್ಕಾರವಿದ್ದು, ಪಕ್ಷದ ಕಾರ್ಯಕರ್ತರು, ಪಕ್ಷಕ್ಕಾಗಿ ಶ್ರಮಿಸಿದವರಿಗೆ ಹುದ್ದೆಗಳನ್ನು ನೀಡಲಾಗುತ್ತದೆ. ಅದನ್ನು ಬಿಜೆಪಿ, ಜೆಡಿಎಸ್ ಪಕ್ಷದವರಿಗೆ ಕೇಳಿ ಕೊಡಬೇಕೆಂದೆನೂ ನಿಯಮವಿಲ್ಲ. ಮೇಲಾಗಿ ಬಿಜೆಪಿ ಸರ್ಕಾರದಲ್ಲಿ ಯಾವುದೇ ನಾಮನಿರ್ದೇಶನ ಮಾಡಿದ ಉದಾಹರಣೆಗಳಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಕಾರ್ಯಕರ್ತರನ್ನು ಗುರುತಿಸುತ್ತಿರುವುದು ವಿರೋಧ ಪಕ್ಷಗಳಿಗೆ ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಇಂತಹ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.