ADVERTISEMENT

ಬೀದಿಬದಿ ವ್ಯಾಪಾರಸ್ಥರಿಗೆ ಕಾಂಪ್ಲೆಕ್ಸ್‌ ನಿರ್ಮಾಣ: ಎ.ಎಸ್‌.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 14:55 IST
Last Updated 25 ಫೆಬ್ರುವರಿ 2023, 14:55 IST
ಮುದ್ದೇಬಿಹಾಳ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಉದ್ಘಾಟಿಸಿದರು
ಮುದ್ದೇಬಿಹಾಳ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಉದ್ಘಾಟಿಸಿದರು   

ವಿಜಯಪುರ: ಮುದ್ದೇಬಿಹಾಳ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಸ್ಥರು ಈ ಹಿಂದೆ ಧೂಳಿನಲ್ಲಿ ಕೂತು ವ್ಯಾಪಾರ ಮಾಡುವ ಪರಿಸ್ಥಿತಿ ಇತ್ತು. ಈಗ ಧೂಳು ರಹಿತ ಸ್ಥಳದಲ್ಲಿ ವ್ಯಾಪಾರ ಮಾಡುವ ವಾತಾವರಣ ನಿರ್ಮಿಸಿದ್ದೇನೆ. ಭವಿಷ್ಯದಲ್ಲಿ ಬೀದಿ ವ್ಯಾಪಾರಸ್ಥರಿಗೆ ಸುಸಜ್ಜಿತ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ಇದೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

ಮುದ್ದೇಬಿಹಾಳ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೀದಿ ಬದಿ ವ್ಯಾಪಾರಸ್ಥರು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ನಾನಿದ್ದೇನೆ. ನೀವು ಜನರಿಗೆ ತೊಂದರೆ ಆಗದಂತೆ ವ್ಯಾಪಾರ ಮಾಡಿ. ನೀವು ಯಾರಿಗೂ ಹಣ ಕೊಡುವ ಅವಶ್ಯಕತೆ ಇಲ್ಲ ಎಂದರು.

ADVERTISEMENT

ಬೀದಿ ಬದಿ ವ್ಯಾಪಾರಸ್ಥರು ಮುಗ್ಧರು. ಅವರು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿರುತ್ತಾರೆ. ಅವರಿಗೆ ಬೆದರಿಕೆ ಹಾಕುವುದು ಮಾಡಬಾರದು. ವ್ಯಾಪಾರಸ್ಥರಿಗೆ ಪಕ್ಷವಿಲ್ಲ. ಅವರ ಉದ್ಯೋಗಕ್ಕೆ ಯಾರೂ ತೊಂದರೆ ಕೊಡಬಾರದು ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಂಗಸ್ವಾಮಿ, ಬೀದಿ ಬದಿ ವ್ಯಾಪಾರಿಗಳು ಸಮಾಜದ ಬೆನ್ನೆಲುಬು. ಪೊಲೀಸರಿಗೆ ಹೆದರುವ ಅವಶ್ಯಕತೆ ಇಲ್ಲ. ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಹಾಯ ಧನ ದೊರೆಯುತ್ತದೆ. ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕೇಂದ್ರದ ಬಿಜೆಪಿ ಸರ್ಕಾರ ಬೀದಿ ಬದಿ ವ್ಯಾಪಾರಸ್ಥರಿಗೆ ಸಂಪೂರ್ಣ ಬೆಂಬಲ ನೀಡಿದೆ. ಬೀದಿ ಬದಿ ವ್ಯಾಪಾರಿಗಳ ಸ್ವಸಹಾಯ ಗುಂಪು ಮಾಡಿ. ಇವರಿಗೂ ನಿಗಮ ಮಂಡಳಿ ಬೇಡಿಕೆ ಇಡಲಾಗಿದೆ. ನೀವೆಲ್ಲ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿ ಎಂದರು.

ಯುವ ಉದ್ಯಮಿ ಭರತ್ ಪಾಟೀಲ ನಡಹಳ್ಳಿ ಮಾತನಾಡಿ, ನಡಹಳ್ಳಿಯವರು ಶಾಸಕರಾಗಿ ಆಯ್ಕೆಯಾದ ಮೇಲೆ ಇಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ. ಕೊರೊನಾ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಕಷ್ಟಕ್ಕೆ ಬಂದವರು ನಡಹಳ್ಳಿಯವರೇ ಹೊರತು, ಬೇರೆಯವರಲ್ಲ. ಅವರು ತಮ್ಮ ಜೀವ ಲೆಕ್ಕಿಸದೆ ಪ್ರತಿ ಮನೆಗೆ ಹೋಗಿ ಆಹಾರ ಕಿಟ್ ಹಂಚಿದರು. ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ಆದರೂ ಕೆಲವರು ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದ್ದಾರೆ ಎಂದರು.

ಸೀತಿಮನಿಯ ರಾಮಸ್ವಾಮಿ ಮಹಾರಾಜರು, ಅಲ್ಲಾಭಕ್ಷ ಖಾಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಮಹಿಬೂಬ ಜಹಾಗೀರದಾರ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಾಲಸಾಬ ಕೊರಬು, ಪಿಂಜಾರ ನದಾಫ, ಸಂಘದ ಅಧ್ಯಕ್ಷ ಮಲೀಕಸಾಬ ನದಾಫ, ದಲಿತ ಮುಖಂಡ ಹರೀಶ ನಾಟೀಕಾರ, ಇಳಕಲ್‌ನ ಉಪನ್ಯಾಸಕ ಲಾಲಹುಸೇನ ಕಂದಗಲ್ಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ಅಧ್ಯಕ್ಷ ಜಗದೀಶ ಪಂಪಣ್ಣವರ, ನಗರ ಬಾಗವಾನ ಜಮಾತ್ ಅಧ್ಯಕ್ಷ ನಬೀಲಾಲ ಹುಣಶ್ಯಾಳ, ಉದ್ಯಮಿ ರಫೀಕ ಜಾನ್ವೇಕರ್, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ರಾಜಶೇಖರ ಹೊಳಿ, ಪ್ರಸನ್ನಕುಮಾರ ಮಠ ಇದ್ದರು.

***

ಬೀದಿ ಬದಿ ವ್ಯಾಪಾರಸ್ಥರನ್ನು ನಾನು ಹೆಚ್ಚು ಪ್ರೀತಿಸುತ್ತೇನೆ. ಏಕೆಂದರೆ ಅವರು ಬಡವರು. ನಾನು ಬಡವರಲ್ಲಿ ದೇವರನ್ನು ಕಾಣುತ್ತೇನೆ

–ಎ.ಎಸ್‌.ಪಾಟೀಲ ನಡಹಳ್ಳಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.