ADVERTISEMENT

ಪ್ರವಾಹ ಕಾಮಗಾರಿ ಮುಂದುವರಿಸಿ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 18 ಮೇ 2020, 12:38 IST
Last Updated 18 ಮೇ 2020, 12:38 IST
ವಿಜಯಪುರ ನಗರದಲ್ಲಿ ಚಮ್ಮಾರ ಬಡ ಕುಟುಂಬಗಳಿಗೆ ಮಂಜೂರಾದ ₹ 5 ಸಾವಿರ ಮಂಜೂರಾತಿ ಪತ್ರವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿತರಿಸಿದರು
ವಿಜಯಪುರ ನಗರದಲ್ಲಿ ಚಮ್ಮಾರ ಬಡ ಕುಟುಂಬಗಳಿಗೆ ಮಂಜೂರಾದ ₹ 5 ಸಾವಿರ ಮಂಜೂರಾತಿ ಪತ್ರವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿತರಿಸಿದರು   

ವಿಜಯಪುರ: ಜಿಲ್ಲೆಯಲ್ಲಿ ನೆರೆಹಾವಳಿ ಸಂದರ್ಭದಲ್ಲಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕಾಮಗಾರಿಗಳು, ಚಾಲ್ತಿಯಲ್ಲಿರುವ ಕಾಮಗಾರಿಗಳು ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಆದ್ಯತೆ ಮೇಲೆ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದರು.

ಲೋಕೋಪಯೋಗಿ ಇಲಾಖೆ, ಸಮಾಜಕಲ್ಯಾಣ ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ನಗರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನೂತನ ಕಾಮಗಾರಿಗಳ ಟೆಂಡರ್‌ಗೆ ಸಂಬಂಧಪಟ್ಟಂತೆ ಹಣಕಾಸು ಇಲಾಖೆಯ ಅನುಮತಿ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ADVERTISEMENT

ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ವಸತಿ ಶಾಲೆ, ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳುವಂತೆ ಹೇಳಿದರು.

ಕೋವಿಡ್-19 ಲಾಕ್‍ಡೌನ್ ಜಾರಿ ಮತ್ತು ಸಂಕಷ್ಟ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ರಸ್ತೆ ಮತ್ತು ಚರಂಡಿ ಕೆಲಸಗಳನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳದಂತೆ ಅವರು ಸೂಚನೆ ನೀಡಿದರು.

ವಿಜಯಪುರ ಮತ್ತು ಹುಬ್ಬಳ್ಳಿ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಉಳಿದಿರುವ ₹40 ಕೋಟಿ ಅನುದಾನ ಪುನರ್‌ ಬಳಕೆಗೆ ಸಂಬಂಧಪಟ್ಟಂತೆ ಈಗಾಗಲೇ ಕಳುಹಿಸಲಾಗಿರುವ ಪ್ರಸ್ತಾವನೆ ಮಂಜೂರಾತಿಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯಪುರ-ಕಾರಜೋಳ ಮಧ್ಯದ 21 ಕಿ.ಮೀ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಹೊಂದಲು ಹೆಚ್ಚುವರಿ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅನುದಾನ ಬೇಡಿಕೆಗೆ ಪರಿಸ್ಕೃತ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ಗೆ ಸೂಚಿಸಿದರು.

ವಿಜಯಪುರ ನಗರದ ಇಟಗಿ ಪೆಟ್ರೋಲ್ ಪಂಪ್‍ದಿಂದ ಗೋದಾವರಿ ಹೋಟೆಲ್‍ವರೆಗೆ ನಿರ್ಮಿಸಬೇಕಾದ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆಗೆ ಅನುಮೋದನೆ ಪಡೆದು ಕಾಮಗಾರಿ ಆರಂಭಕ್ಕೆ ವಿಶೇಷ ಗಮನ ನೀಡುವಂತೆ ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣೆಗೆ ವಿಶೇಷ ಒತ್ತು ನೀಡಲಾಗಿದೆ. ಕೋವಿಡ್ ಪರಿಸ್ಥಿತಿ ಸುಧಾರಣೆಗೊಂಡ ನಂತರ ಆದ್ಯತೆ ಮೇಲೆ ಈ ಕಾಮಗಾರಿಗಳಿಗೆ ಗಮನ ನೀಡಲಾಗುವುದು ಎಂದರು.

ರಸ್ತೆಯ ಬದಿ ಚರ್ಮಗಾರಿಕೆ(ಚಮ್ಮಾರಿಕೆ) ಮಾಡುವ ಬಡ ಕೂಲಿಗಾರಿಕೆ ಕುಟುಂಬಗಳ ನೆರವಿಗಾಗಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಳಕಳಿಯ ಫಲವಾಗಿ ಪ್ರತಿಯೊಬ್ಬರಿಗೆ ₹ 5 ಸಾವಿರ ಆರ್‌ಟಿಜಿಎಸ್ ಮೂಲಕ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಹೇಳಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಬಳಸಲಾಗುತ್ತಿರುವ ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಜನರಿಗೆ ಊಟ, ಉಪಾಹಾರ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಭೂ ಒಡೆತನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಜಮೀನು ನೀಡುವ ಕುರಿತಂತೆ ಪ್ರಸ್ತಾವನೆ ಪರಿಶೀಲಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವಹಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಎಂಜಿನಯರ್‌ ಬಿ.ಬಿ ಪಾಟೀಲ, ಸಹಾಯಕ ಎಂಜಿನಿಯರ್‌ ಆರ್.ಕೆ ಮಜುಂದಾರ್, ಆರ್.ಕೆ ಕತ್ತಿ, ಎಸ್.ಎನ್.ಕರೂರ, ಎಂ.ಎಸ್. ನಿಡೋಣಿ, ಜಿ.ಎಸ್. ಪಾಟೀಲ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.