
ವಿಜಯಪುರ: ಸಹಕಾರ ರಂಗದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಸೌಹಾರ್ದ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಂಕರಗೌಡ ಪಾಟೀಲ ಅವರು ಕರ್ನಾಟಕ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರಿಗೆ ಸೌಹಾರ್ದ ಸಹಕಾರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಶುಕ್ರವಾರ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಗುರುಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಶಂಕರಗೌಡರು ಸಹಕಾರ ಸಂಘದಲ್ಲಿ ಅನೇಕ ನೂರಾರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಪ್ರಯತ್ನಪಟ್ಟಿದ್ದಾರೆ. ಸಾವಿರಾರು ಯುವಕರಿಗೆ ದುಡಿಯುವ ಶಕ್ತಿಯನ್ನು ನೀಡಿದ್ದಾರೆ. ಅವರು ಸಹಕಾರ ಬೆಳೆಸುವ ಮನೋಭಾವ ಉಳ್ಳವರು ಆಗಿದ್ದಾರೆ. ವಿಜಯಪುರ ಜಿಲ್ಲೆ ಬಾಗಲಕೋಟೆ ಹಾಗೂ ಸುತ್ತಲಿನ ಜಿಲ್ಲೆಗಳಿಗೆ ವಿವಿಧ ಸಂಘ-ಸಂಸ್ಥೆಗಳಿಗೆ ಇವರ ಸಲಹೆ ಬಹಳ ಮುಖ್ಯವಾಗಿದೆ. ಈ ಸಹಕಾರ ಸಾಧಕರಿಗೆ ಸಹಕಾರ ರತ್ನ ನೀಡಿರುವುದು ಅತ್ಯಂತ ಸಂತೋಷ ತರಿಸಿದೆ ಎಂದರು.
ಸನ್ಮಾನ ಸ್ವೀಕರಿಸಿ ಶಂಕರಗೌಡ ಪಾಟೀಲ ಮಾತನಾಡಿ, ದುಡಿಮೆಯಲ್ಲಿ ನಾನು ಎಂದು ಪ್ರಶಸ್ತಿಗಳನ್ನು ಪಡೆದವನಲ್ಲ, ದುಡಿಮೆಯೇ ನನಗೆ ದೇವರು. ಮಿತ್ರರು ಮತ್ತು ಸಹಕಾರ ಸಂಘದ ಕೆಲವು ಗೆಳೆಯರು ತಾವಾಗಿ ನನ್ನ ಪರಿಚಯ ಪತ್ರವನ್ನು ಪಡೆದು ನನಗೆ ಪ್ರಶಸ್ತಿ ದೊರಕಿಸಿದ್ದಾರೆ. ಅವರ ಈ ಅಭಿಮಾನಕ್ಕೆ ನಾನು ಚಿರಋಣಿ ಎಂದರು.
ನಿಷ್ಠೆ ಮತ್ತು ದೃಢ ನಿರ್ಧಾರದಿಂದ ಹಣದ ಮೇಲೆ ವ್ಯಾಮೋಹ ಇರದಿದ್ದರೆ ಜೀವನದಲ್ಲಿ ಯಶಸ್ವಿ ಕಾಣಬಹುದು. ಜೀವನದಲ್ಲಿ ಅನೇಕ ತೊಂದರೆಗಳು ಬಂದರು ದೇವರ ಮೇಲೆ ಭರವಸೆ ಇಟ್ಟು ಮುನ್ನಡೆಯುತ್ತಿರುವೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿದರು. ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕಿನ ಅಧ್ಯಕ್ಷ ರವಿ ಬಿಜ್ಜರಗಿ, ಎಸ್.ಡಿ. ಬಿರಾದಾರ, ಎಸ್.ಎಂ ದೇಸಾಯಿ, ನಿವೃತ್ತ ಡಿವೈಎಸ್‌ಪಿ ಬಿ.ಆರ್. ಚೌಕಿಮಠ, ಹಂಚಿನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.