ADVERTISEMENT

ಲಾಕ್‌ಡೌನ್‌: ವಿಜಯಪುರ ಜಿಲ್ಲೆಯಲ್ಲಿ ಮತ್ತಷ್ಟು ಬಿಗಿ

ಕೊರೊನಾ ಸೊಂಕು ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಂಡ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 13:09 IST
Last Updated 10 ಏಪ್ರಿಲ್ 2020, 13:09 IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿದರು. ಎಸ್‌.ಪಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದರೆಡ್ಡಿ ಇದ್ದಾರೆ
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿದರು. ಎಸ್‌.ಪಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದರೆಡ್ಡಿ ಇದ್ದಾರೆ   

ವಿಜಯಪುರ: ಕೊರೊನಾ ಸೊಂಕು ಜಿಲ್ಲೆಗೆ ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಲಾಕ್‌ಡೌನ್‌ ಅನ್ನು ಮತ್ತಷ್ಟು ಬಿಗಿಗೊಳಿಸಿದೆ.

ವೈದ್ಯಕೀಯ ತುರ್ತು ಸೇವೆ ಹೊರತು ಪಡಿಸಿ ಬೇರೆ ಯಾರಿಗೂ ಹೊರ ಜಿಲ್ಲೆಗಳಿಗೆ ಹೋಗಿಬರಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೈದ್ಯಕೀಯ ಸೌಲಭ್ಯಗಳು ಜಿಲ್ಲೆಯಲ್ಲಿ ಲಭ್ಯವಿಲ್ಲ ಎಂದು ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಹೊರ ಜಿಲ್ಲೆಗಳಿಗೆ ಹೋಗಲು ಅನುಮತಿ ನೀಡಲಾಗುವುದು. ಇಲ್ಲವಾದರೆ ಅದಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ವೈದ್ಯಕೀಯ ಉದ್ದೇಶದಿಂದ ಬೇರೆ ಜಿಲ್ಲೆಗೆ ಒಮ್ಮೆ ಹೋದವರು ಮರಳಿ ಜಿಲ್ಲೆಗೆ ಬರುವಂತಿಲ್ಲ. ಒಂದು ವೇಳೆ ಬಂದರೆ ಅವರ ಇಡೀ ಕುಟಂಬವನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಎಂದು ಹೇಳಿದರು.

ನೌಕರರು ಅಡ್ಡಾಡುವಂತಿಲ್ಲ:ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ಜಿಲ್ಲೆಯಿಂದ ಹೊರ ಜಿಲ್ಲೆಗೆ ಕೆಲಸದ ನಿಮಿತ್ತ ನಿತ್ಯ ಹೋಗಿಬರಲು ಅವಕಾಶ ನೀಡುವುದಿಲ್ಲ. ರಜೆ ತೆಗೆದುಕೊಂಡು ಮನೆಯಲ್ಲೇ ಇರಬಹುದು. ಇಲ್ಲವೇ, ಕೆಲಸ ಮಾಡುವ ಸ್ಥಳದಲ್ಲೇ ಇರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಶೇ 50ರಷ್ಟು ಹಂಚಿಕೆ:ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಈಗಾಗಲೇ ಶೇ 50ರಷ್ಟು ಪಡಿತರವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಪಡಿತರ ಪದಾರ್ಥಗಳನ್ನು ಖರೀದಿಸುವಾಗ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪಡಿತರ ಹಂಚಿಕೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದರೆ ಅಂತಹ ನ್ಯಾಯಬೆಲೆ ಅಂಗಡಿಗಳ ಲೈಸನ್ಸ್‌ ರದ್ದುಗೊಳಿಸಲಾಗುವುದು. ಪ್ರತಿಯೊಬ್ಬಫಲಾನುಭವಿಗೂ ಪಡಿತರವನ್ನು ತಲುಪಿಸುವ ಕಾರ್ಯ ಜಿಲ್ಲಾಡಳಿತ ಮಾಡಲಿದೆ ಎಂದು ಭರವಸೆ ನೀಡಿದರು.

ರಾಜಕೀಯಕ್ಕೆ ಅವಕಾಶವಿಲ್ಲ:ರಾಜಕೀಯ ಮತ್ತು ವೈಯಕ್ತಿಕ ಹಿತಾಸಕ್ತಿಗಾಗಿ ಜಿಲ್ಲೆಯಲ್ಲಿ ಕೆಲವರು ಬಡಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪಡೆಯಲು ಜನರನ್ನು ಗುಂಪು ಸೇರಿಸಿಕೊಂಡು ಕಚೇರಿಗೆ ಬರುವುದು, ಶಿಫಾರಸು ಪತ್ರಗಳನ್ನು ಕೊಟ್ಟು ಕಳುಹಿಸುವುದು ಮಾಡುತ್ತಿದ್ದು, ಇದಕ್ಕೆ ಅವಕಾಶವಿಲ್ಲ. ಸಮಸ್ಯೆಗಳಿದ್ದರೆ ಜಿಲ್ಲಾಡಳಿತ ಆದ್ಯತೆ ಮೇರೆಗೆ ಬಗೆಹರಿಸಲಿದೆ ಎಂದು ಹೇಳಿದರು.

ಯಾರಾದರೂ ಜನರನ್ನು ಗುಂಪುಗೂಡಿಸುವುದು, ಎತ್ತಿಕಟ್ಟುವ ಕೆಲಸ ಮಾಡಿದರೆ ಅಂತವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.

434 ಜನರ ಮೇಲೆ ನಿಗಾ
ವಿಜಯಪುರ:
ಕೊರೊನಾ ಸೋಂಕಿನ ಸಂಬಂಧ ಜಿಲ್ಲೆಯಲ್ಲಿ ಇದುವರೆಗೆ 434 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ಇದರಲ್ಲಿ 247 ಜನ 28 ದಿನಗಳ ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ. 149 ಜನ 15ರಿಂದ 28 ದಿನಗಳ ರಿಪೋಟಿಂಗ್‌ ಅವಧಿಯಲ್ಲಿದ್ದಾರೆ. 38 ಜನ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದರು.

ಇದುವರೆಗೆ 75 ಜನರ ಗಂಟಲ ದ್ರವವನ್ನು ಕಲಬುರ್ಗಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, 63 ಜನರ ವೈದ್ಯಕೀಯ ವರದಿ ನೆಗೆಟಿವ್‌ ಬಂದಿದೆ. 12 ಜನರ ವರದಿ ಬರುವುದು ಬಾಕಿ ಇದೆ. ಶುಕ್ರವಾರ ಮತ್ತೆ 12 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.