ADVERTISEMENT

ಜೀವಕ್ಕಿಂತ ಜೀವನ ದೊಡ್ಡದಲ್ಲ: ಎ.ಎಸ್.ಪಾಟೀಲ ನಡಹಳ್ಳಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 13:03 IST
Last Updated 30 ಏಪ್ರಿಲ್ 2021, 13:03 IST
ಎ.ಎಸ್.ಪಾಟೀಲ ನಡಹಳ್ಳಿ
ಎ.ಎಸ್.ಪಾಟೀಲ ನಡಹಳ್ಳಿ   

‘ನಾನು ಮತ್ತು ನನ್ನ ತಂದೆ ಇಬ್ಬರೂ ಪಾಸಿಟಿವ್‌ ಆಗಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನಾನು ಬಹುತೇಕ ಚೇತರಿಸಿಕೊಂಡಿದ್ದೇನೆ. ತಂದೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಲು ಇನ್ನೂ ಮೂರ್ನಾಲ್ಕು ದಿನ ಬೇಕಾಗಬಹುದು ಎನ್ನುತ್ತಾರೆ ಮುದ್ದೇಬಿಹಾಳ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ.

ಬೆಂಗಳೂರಿನ ಆಸ್ಪತ್ರೆಗಳಲ್ಲಿಕೋವಿಡ್‌ನಿಂದ ಬಳಲುತ್ತಿರುವವರನ್ನು ನೋಡಿದರೆ ಬೇಸರ ಎನಿಸುತ್ತದೆ.ಆಸ್ಪತ್ರೆಯಲ್ಲಿ ಬೆಡ್‌ ಸಿಗದ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಸ್ವಂತ ನಮ್ಮ ತಂದೆಗೆ ಬೆಡ್‌ ಸಿಗುವ ಪರಿಸ್ಥಿತಿ ಇರಲಿಲ್ಲ. ಶಾಸಕ ಎಂಬ ಒಂದೇ ಕಾರಣಕ್ಕೆ ಬೆಡ್‌ ಲಭಿಸಿದೆ. ಕೋವಿಡ್‌ನಿಂದ ಬಳಲಿದ್ದ ನಮ್ಮ ತಂದೆಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಲಭಿಸಿದ ಕಾರಣಕ್ಕೆ ಅವರು ಮರುಜನ್ಮ ಪಡೆದಂತಾಗಿದೆ.

ಕೋವಿಡ್‌ ಪ್ರಥಮ ಹಂತದ ಲಸಿಕೆ ಪಡೆದುಕೊಂಡಿದ್ದ ಪರಿಣಾಮ ನಮಗೆ ಕೋವಿಡ್‌ನಿಂದ ಆರೋಗ್ಯದ ಮೇಲೆ ಅಷ್ಟೊಂದು ಪರಿಣಾಮವಾಗಿಲ್ಲ ಎನ್ನುತ್ತಾರೆ ಅವರು.

ADVERTISEMENT

ಕೋವಿಡ್‌ ನಮ್ಮನ್ನು ಸಂಪೂರ್ಣ ನಿಶಕ್ತರನ್ನಾಗಿಸುತ್ತದೆ. ಬಾಯಲ್ಲಿ ಏನನ್ನೂ ತಿನ್ನಲಾಗದಷ್ಟು ವಿಷವಾಗುತ್ತದೆ. ಕಣ್ಣು, ತಲೆ ಸುತ್ತು ಬರುತ್ತದೆ. ಕೋವಿಡ್‌ ವಾಸಿ ಮಾಡಲು ಸದ್ಯ ಯಾವುದೇ ನಿರ್ಧಿಷ್ಟ ಔಷಧವಿಲ್ಲ. ನಮ್ಮ ದೇಹದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸುವ ಮೂಲಕ ಮಾತ್ರ ಅದನ್ನು ಎದುರಿಸಬೇಕಷ್ಟೇ.

ಕೋವಿಡ್ ಎರಡನೇ ಅಲೆ ನಾವು ಊಹಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ.ಜೀವಕ್ಕಿಂತ ಜೀವನ ದೊಡ್ಡದಲ್ಲ. ಸ್ವಲ್ಪ ದಿನಗಳ ಕಾಲ ಹೊರಗಡೆ ಎಲ್ಲೂ ಅಡ್ಡಾಡದೇ ಮನೆಯಲ್ಲಿ ಕುಟುಂಬದೊಂದಿಗೆ ಆರಾಂ ಆಗಿರಿ. ಕೋವಿಡ್‌ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದ ಬಳಿಕ ಎಂದಿನಂತೆ ಜೀವನ ನಡೆಸಿ, ಮೊದಲು ಜೀವ ಉಳಿಸಿಕೊಳ್ಳಲು ಆದ್ಯತೆ ನೀಡಿ.

ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ನನಗೆ ವಯಸ್ಸಿದೆ, ಶಕ್ತಿ ಇದೆ, ಏನಾಗಲ್ಲ ಎಂದು ಹುಂಬುತನ ತೋರಿಸಬೇಡಿ. ಕೋವಿಡ್‌ ಬಂದ ಬಳಿಕ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಉಸಿರಾಟ ಸಮಸ್ಯೆ ಇರುವವರು ಸಿಟಿ ಸ್ಕ್ಯಾನ್‌ ಮಾಡಿಸಿಕೊಂಡು ಅಗತ್ಯ ಚಿಕಿತ್ಸೆ ಪಡೆಯಬೇಕು. ಶ್ವಾಸಕೋಶಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ಮಾಡಿದಷ್ಟು ಅಪಾಯ ಹೆಚ್ಚು. ಆಕ್ಸಿಜನ್‌, ವೆಂಟಿಲೇಟರ್‌, ರೆಮ್‌ಡಿಸಿವಿರ್‌ ಇಂಜೆಕ್ಷನ್‌, ಇಂಜೆಕ್ಷನ್‌, ವೈದ್ಯರು ಏನಿದ್ದರೂ ಬದುಕುಳಿಯುವುದು ಕಷ್ಟ ಸಾಧ್ಯ. ಆರೋಗ್ಯವಾಗಿರುವರಿಗೆ ಬಂದರೂ ಸಹ ನಿರ್ಲಕ್ಷ್ಯ ಮಾಡಿದರೆ ಐದಾರು ದಿನಗಳಲ್ಲೇ ಕೈಮೀರುತ್ತದೆ.

ಬಿಸಿ ನೀರು, ಕಷಾಯ ಕುಡಿಯಬೇಕು, ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸ್‌ ಬಳಸುವುದು ಸೇರಿದಂತೆ ಮುನ್ನೆಚ್ಚರಿಕೆ ವಹಿಸಿದರೆ ಕೋವಿಡ್‌ ನಮ್ಮ ಬಳಿ ಸುಳಿಯುವುದಿಲ್ಲ. ಎಚ್ಚರ ವಹಿಸಿ, ಧೈರ್ಯವಾಗಿರಿ.

ನಿರೂಪಣೆ: ಬಸವರಾಜ್‌ ಸಂಪಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.