ನಾಲತವಾಡ: ಪಟ್ಟಣದ ವಿವಿಧ ಬಾವಿಗಳಲ್ಲಿರುವ ಮೊಸಳೆಗಳಿಂದ ಆಗಬಹುದಾದ ಅನಾಹುತಕ್ಕೆ ತಡೆ ನೀಡುವ ಪ್ರಯತ್ನಗಳು ವೇಗ ಪಡೆದುಕೊಂಡಿವೆ.
ಪಟ್ಟಣ ಪಂಚಾಯಿತಿ ವತಿಯಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಗಂಗಾಧರ ನಗರದ ಬಾವಿ, ಮುಖ್ಯ ಮಾರುಕಟ್ಟೆ ಪಕ್ಕದ ಸ್ಥಾವರಮಠ ಅವರ ಬಾವಿ ಸೇರಿದಂತೆ ಖಾನ ಬಾವಿಯಲ್ಲಿ ಮೊಸಳೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು. ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಪ್ರಾಣಾಪಾಯ ಆಗದಂತೆ ಜಾಗೃತಿ ವಹಿಸಿರುವ ಪಟ್ಟಣ ಪಂಚಾಯಿತಿ, ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಪೃಥ್ವಿರಾಜ್ ನಾಡಗೌಡ ಅವರ ನೇತೃತ್ವದಲ್ಲಿ ಎರಡು ವಾರಗಳಿಂದ ನಿರಂತರ ಮೊಸಳೆ ಹಿಡಿಯುವ ಕಾರ್ಯ ನಡೆಯುತ್ತಿದೆ.
ಈಗಾಗಲೇ ಎರಡು ಬಾವಿಗಳನ್ನು ಖಾಲಿ ಮಾಡಿ ಮೊಸಳೆ ಹಿಡಿಯುವಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದೀಗ ಖಾನ ಬಾವಿಯಲ್ಲಿ ಎರಡು ಮೊಸಳೆಗಳು ಇದ್ದುದಾಗಿ ಮಾಹಿತಿ ದೊರೆತಿದ್ದು, ನಾಲ್ಕು ಮೋಟಾರ್ ಬಳಸಿ ನೀರು ಖಾಲಿ ಮಾಡುವ ಕಾರ್ಯಾಚರಣೆಗೆ ಪೌರ ಸಿಬ್ಬಂದಿ ತೊಡಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸದಸ್ಯರಾದ ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ ಸೇರಿದಂತೆ ಪೌರ ಸಿಬ್ಬಂದಿ ವಿಶಿಷ್ಟ ಕಾಳಜಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಮೊಸಳೆಗಳನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಪ್ರಕ್ರಿಯೆ ಮುಂದುವರಿದಿದೆ. ಅಪಾಯದ ಪರಿಸ್ಥಿತಿಯಲ್ಲಿ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.