ಇಂಡಿ: ಸೊರಗು ರೋಗ, ಬೇರು ಗಂಟು ರೋಗ, ಕ್ಯಾರ ರೋಗ ದಾಳಿಂಬೆಗೆ ಬರುವ ಪ್ರಮುಖ ರೋಗಗಳಾಗಿದ್ದು ಬೆಳೆ ಸಂರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ಸೋಲಾಪುರದ ವಿಜ್ಞಾನಿ ಮಂಜುನಾಥ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ, ಸೋಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ, ಇಂಡಿಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಸ್ವಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ಪರಂಪರಾಗತ ಕೃಷಿ ಯೋಜನೆ ಅಡಿಯಲ್ಲಿ ನಡೆದ ನಿಂಬೆ ಹಾಗೂ ದಾಳಿಂಬೆ ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ರೋಗಮುಕ್ತ ಗಿಡಗಳಿಂದ ಪಡೆದ ಸಸಿಗಳನ್ನು ನಾಟಿಯಾಗಿ ಬಳಸಬೇಕು. ಗಿಡದಿಂದ ಗಿಡಕ್ಕೆ 4.5 ಅಡಿ ಅಂತರ ನೀಡಿ ನಾಟಿ ಮಾಡಬೇಕು. ನಾಟಿ ಸಮಯದಲ್ಲಿ ಕೊಟ್ಟಿಗೆ ಗೊಬ್ಬರದ ಜತೆಯಲ್ಲಿ ಟ್ರೈಕೋಡರ್ಮ ಹಾರ್ಜಯಾನಂ 25 ಗ್ರಾಂ, ಬ್ಯಾಸಿಲಸ್ ಸಲ್ಪಲೀನ ಸುಡೋಮೊನಾಸ ಪೋಲರೊಸನ್ಸ 50 ಗ್ರಾಂ, ಪ್ಯಾಸಿಲೋವೈಸಿನ್ಸ 25 ಗ್ರಾಂ ನೀಡಬೇಕು’ ಎಂದರು.
ಸೊರಗುರೋಗ ಬಂದ ಸುತ್ತಮುತ್ತಲಿನ ಗಿಡಗಳಿಗೆ ಶೀಲಿಂಧ್ರ ಕಾರಕ ಮತ್ತು ಕೀಟನಾಶಕ ಮಿಶ್ರಣ ಬೆರೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಸಿ ಅಬೀದ್ ಗದ್ಯಾಳ ಮಾತನಾಡಿ, ‘ಕೃಷಿಯಲ್ಲಿ ಹೊಸ ಜ್ಞಾನ ಅಳವಡಿಸಿಕೊಂಡು, ಪರಂಪರಾಗತ ಕೃಷಿ ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚು ಲಾಭ ಪಡೆಯಲು ಪ್ರಯತ್ನಿಸಬೇಕು. ಭೂಮಿಗೆ ನಮ್ಮ ಆಸೆಗಳನ್ನು ಈಡೇರಿಸುವ ಶಕ್ತಿ ಇದೆ, ದುರಾಸೆ ಈಡೇರಿಸುವ ಶಕ್ತಿ ಇಲ್ಲ’ ಎಂದರು.
ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ವಿಜ್ಞಾನಿ ರೂಪಾ ಸೌಜನ್ಯ ವಿವಿಧ ದಾಳಿಂಬೆ ತಳಿಗಳ ಬಗ್ಗೆ ಮಾತನಾಡಿದರು.
ಇಂಡಿ ಕೆವಿಕೆ ಮುಖ್ಯಸ್ಥ ಶಿವಶಂಕರ ಮೂರ್ತಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ, ವಿಜ್ಞಾನಿ ಹೀನಾ, ಕಿಶೋರ ಜಾಧವ ಮಾತನಾಡಿದರು.
ವೇದಿಕೆಯಲ್ಲಿ ವಿಜ್ಞಾನಿ ಡಾ. ಪ್ರಕಾಶ, ರವಿ ಬಾಲಗಾಂವ ಇದ್ದರು. ಅಥರ್ಗಾ, ತಡವಲಗಾ, ರೂಗಿ, ಭತಗುಣಕಿ ಮತ್ತಿತರ ಗ್ರಾಮಗಳಿಂದ ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.