ADVERTISEMENT

ಕ್ರಸರ್‌ ಸ್ಫೋಟ ಪ್ರಕರಣ: ದೂರು ದಾಖಲು

ಅಕ್ರಮ ಗಣಿಕಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ: ಶಾಸಕ ಚವ್ಹಾಣ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 16:16 IST
Last Updated 9 ಜುಲೈ 2021, 16:16 IST
ದೇವಾನಂದ ಚವ್ಹಾಣ
ದೇವಾನಂದ ಚವ್ಹಾಣ   

ವಿಜಯಪುರ: ತಾಲ್ಲೂಕಿನ ಐನಾಪುರ ಗ್ರಾಮ ವ್ಯಾಪ್ತಿಯಲ್ಲಿ ಗುರುವಾರ ಜಲ್ಲಿ ಕಲ್ಲು ಕ್ರಷರ್‌ನಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಜಲ್ಲಿ ಕಲ್ಲು ಕ್ರಷರ್‌ ಮಾಲೀಕ ಅಶೋಕ ಎಸ್‌.ಸಾವಳಗಿ ಮತ್ತು ಜಮೀನಿನ ಮಾಲೀಕ ರಮೇಶ ಕವಟಗಿ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣಿ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ತಿಳಿಸಿದ್ದಾರೆ.

ಸ್ಟೋಟದಿಂದ ಒಬ್ಬ ಕಾರ್ಮಿಕ ಸಾವಿಗೀಡಾಗಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ADVERTISEMENT

ಶಾಸಕ ಆರೋಪ: ಜಿಲ್ಲೆಯಲ್ಲಿ ಅಕ್ರಮ ಗಣಿಕಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಅಮಾಯಕರ ಬಲಿಯಾಗಿದೆ. ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಶಾಸಕ ಡಾ. ದೇವಾನಂದ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಠಾಣ ಮತಕ್ಷೇತ್ರದಲ್ಲಿ ಹಲವಾರು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಿದೆ. ನಗರದ ಹೊರವಲಯದಲ್ಲಿ ನಿರ್ಗತಿಕರು, ಬಡವರು ವಾಸವಿದ್ದಾರೆ. ಇದರ ಹತ್ತಿರವೇ ಸಾಕಷ್ಟು ಜಗತ್ಪ್ರಸಿದ್ಧ ಸ್ಮಾರಕಗಳು ಇವೆ ಮತ್ತು ಅಕ್ವಾಡೆಕ್ಟ್ ಹಾದು ಹೋಗಿದೆ. ಈ ಪ್ರದೇಶವೂ ಅತ್ಯಂತ ಸೂಕ್ಷ್ಮವಾಗಿದ್ದು, ಇಂತಹ ಸ್ಥಳದಲ್ಲಿ ಗಣಿಗಾರಿಕೆ ನಡೆಯುವುದರಿಂದ ಪದೇ ಪದೇ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಗಣಿಗಾರಿಕೆ ಮಾಡುವಾಗ ಬ್ಲಾಸ್ಟಿಂಗ್ ಮಾಡಬಾರದು ಎಂಬ ನಿಯಮವಿದ್ದರೂ, ಬ್ಲಾಸ್ಟಿಂಗ್ ಮಾಡಲಾಗಿದೆ. ತಕ್ಷಣವೇ ಅಕ್ರಮ ಗಣಿಗಾರಿಕೆ ತಡೆಯಲು ಜಿಲ್ಲಾಡಳಿತ ಕ್ರಮ ಕೈಕೊಳ್ಳಬೇಕು. ಸಾವನ್ನಪ್ಪಿದ ಅಮಾಯಕ ಜೀವಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಿ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.