ADVERTISEMENT

‘ಮಣ್ಣು ಉಳಿಸಿ’ ಜಾಗೃತಿಗೆ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 7:06 IST
Last Updated 5 ಡಿಸೆಂಬರ್ 2022, 7:06 IST
‘ವಿಶ್ವ ಮಣ್ಣು ದಿನ’ದ ಅಂಗವಾಗಿ ವಿಜಯಪುರ ನಗರದಲ್ಲಿ ಸೋಮವಾರ ಸೈಕಲ್‌ ಜಾಥಾ ನಡೆಯಿತು
‘ವಿಶ್ವ ಮಣ್ಣು ದಿನ’ದ ಅಂಗವಾಗಿ ವಿಜಯಪುರ ನಗರದಲ್ಲಿ ಸೋಮವಾರ ಸೈಕಲ್‌ ಜಾಥಾ ನಡೆಯಿತು   

ವಿಜಯಪುರ: ‘ವಿಶ್ವ ಮಣ್ಣು ದಿನ’ದ ಅಂಗವಾಗಿವಿಜಯಪುರ ಸೈಕ್ಲಿಂಗ್ ಗ್ರೂಪ್‌, ಕೃಷಿ ವಿಜ್ಞಾನ ಕೇಂದ್ರ, ಈಶಾ ಫೌಂಡೇಶನ್, ರೋಟರಿ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸೋಮವಾರ ನಗರದ ಡಾ.ಬಿ.ಆರ್‌. ಅಂಬೇಡ್ಕರ್ ಸರ್ಕಲ್‍ನಿಂದ ಗಾಂಧಿ ಚೌಕ ಮಾರ್ಗವಾಗಿ ಸಿದ್ದೇಶ್ವರ ದೇವಸ್ಥಾನದ ವರೆಗೆ ಸೈಕಲ್‌ ಜಾಥಾ ನಡೆಸುವ ಮೂಲಕ ಮಣ್ಣಿ ಉಳಿಸುವಂತೆ ಜಾಗೃತಿ ಮೂಡಿಸಲಾಯಿತು.

ಗಾಳಿ, ಬೆಳಕು, ನೀರು, ಬೆಂಕಿ, ಭೂಮಿ ಪಂಚಮಹಾಭೂತಗಳಿಂದ ನಿರ್ಮಾಣಗೊಂಡ ಈ ಪ್ರಕೃತಿ ಸಾವಿರಾರು ವರ್ಷಗಳಿಂದ ಕೋಟ್ಯಂತರ ಜೀವ ರಾಶಿಗಳಿಗೆ ಆಶ್ರಯ ನೀಡಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಕಳೆದ 100 ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಕೃತಿಗೆ ದಕ್ಕೆ ತರುವ ಕೆಲಸ ಮಾಡಿದ್ದಾನೆ. ಇದು ಹೀಗೆಯೆ ಮುಂದುವರೆದರೆ ವಿನಾಶ ತಪ್ಪಿದ್ದಲ್ಲ ಎಂದುವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಹೇಳಿದರು.

ಸೈಕಲ್ ಎನ್ನುವುದು ಕೇವಲ ದೈಹಿಕ ವ್ಯಾಯಾಮದ ಸಾಧನವಲ್ಲ. ಅದು ಪ್ರಕೃತಿಯ ಸಂಕೇತ. ಸೈಕಲ್ ಬಳಸುವುದು ಎಂದರೆ ನಾವು ಪ್ರಕೃತಿಯೊಂದಿಗೆ ಜೀವಿಸುತ್ತೇವೆ ಮತ್ತು ಪ್ರಕೃತಿಯನ್ನು ಆದರಿಸುತ್ತೇವೆ ಎಂದು ಅರ್ಥ ಎಂದರು.

ADVERTISEMENT

ಇಶಾ ಫೌಂಡೇಶನ್ ಬಸವರಾಜ ಬಿರಾದಾರ, ಮಣ್ಣಿನಲ್ಲಿರುವ ಉತ್ತಮ ಅಂಶಗಳು ಕಣ್ಮರೆಯಾಗಿ, ಬೆಳೆಯುವ ಬೆಳೆಯಲ್ಲಿ ಶರೀರಕ್ಕೆ ದೊರಕಬೇಕಿದ್ದ ಪೋಷಕಾಂಶಗಳ ಅಲಭ್ಯತೆಯಿಂದ ರೋಗರುಜಿನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಸರಿಯಾದ ಆಹಾರ ಅಲಭ್ಯತೆಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತದೆ ಎಂದರು.

ವಿಜಯಪುರದಿಂದ ದೆಹಲಿಯವರೆಗೆ ಮಣ್ಣು ಉಳಿಸಿ ಜಾಗೃತಿ ಸೈಕಲ್ ಜಾಥಾ ನಡೆಸಿದ ರೈಲ್ವೆ ನೌಕರ ಮುತ್ತಣ್ಣ ಬಿರಾದಾರ ಅವರಿಗೆ ಅಭಿನಂದಿಸಲಾಯಿತು.

ಕೃಷಿ ವಿವಿ ಪ್ರಾಧ್ಯಾಪಕ ಡಾ.ರವೀಂದ್ರ ಬೆಳ್ಳಿ, ಮೇಜರ್ ಸಂತೋಷ ಸೊಣಗಿ ಮಾತನಾಡಿದರು. ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಸಚೀನ ಪಾಟೀಲ, ಡಾ.ಪ್ರವೀಣ ಬಗಲಿ, ಶಂಭು ಕರ್ಪೂರಮಠ, ಬಸವರಾಜ ದೇವರ, ಸಂತೋಷ ಅವರಸಂಗ, ಶಿವಕುಮಾರ ಉಪ್ಪಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.