ADVERTISEMENT

ಒಲಿಂಪಿಕ್ಸ್‌; ತೃಪ್ತಿಕರ ಸಾಧನೆ ಇಲ್ಲ

ಮಹಿಳಾ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ಚಾಲನೆ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 15:09 IST
Last Updated 8 ಫೆಬ್ರುವರಿ 2020, 15:09 IST
ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಂ.ಬಿ.ಪಾಟೀಲ ಮಾತನಾಡಿದರು
ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಂ.ಬಿ.ಪಾಟೀಲ ಮಾತನಾಡಿದರು   

ವಿಜಯಪುರ: ಭಾರತ ದೇಶ 130 ಕೋಟಿ ಜನಸಂಖ್ಯೆ ಹೊಂದಿದ್ದರೂ ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಧನೆ ತೃಪ್ತಿದಾಯಕವಾಗಿಲ್ಲ ಎಂದು ಶಾಸಕ ಎಂ.ಬಿ.ಪಾಟೀಲ ವಿಷಾದ ವ್ಯಕ್ತಪಡಿಸಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರಿಕೆಟ್ ಹೊರತುಪಡಿಸಿ ಉಳಿದ ಕ್ರೀಡೆಗಳಿಗೆ ಅಷ್ಟಾಗಿ ಪ್ರಾಶಸ್ತ್ಯ ದೊರಕಿಲ್ಲ. ಹೀಗಾಗಿ, ಒಲಿಂಪಿಕ್ಸ್‌ನಲ್ಲಿ ಪದಕಗಳ ಬೇಟೆ ಸಾಧ್ಯವಾಗುತ್ತಿಲ್ಲ. ಅಥ್ಲೆಟಿಕ್ಸ್‌ ಸೇರಿದಂತೆ ಎಲ್ಲ ಕ್ರೀಡೆಗಳಿಗೆ ಸಮಾನ ಪ್ರಾಶಸ್ತ್ಯ ದೊರಕಿದಾಗ ಮಾತ್ರ ನಮ್ಮ ಕ್ರೀಡಾಪಟುಗಳು ಮಿಂಚಲು ಸಾಧ್ಯವಾಗುತ್ತದೆ. ಕಾರ್ಪೋರೇಟ್ ಕಂಪನಿಗಳು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಈಗಾಗಲೇ ಜಿಂದಾಲ್ ಸೇರಿದಂತೆ ಕೆಲವು ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ ಎಂದರು.

ADVERTISEMENT

ಸೈಕ್ಲಿಂಗ್‌ ವೆಲೊಡ್ರೋಮ್‌ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿರುವುದು ನೋವಿನ ಸಂಗತಿ. ವೆಲೊಡ್ರೋಮ್‌ ಇಲ್ಲದ್ದರಿಂದ ಈ ಭಾಗದ ಸೈಕ್ಲಿಸ್ಟ್‌ಗಳು ತರಬೇತಿ ಹಾಗೂ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಸೈಕ್ಲಿಸ್ಟ್‌, ವಿಜಯಪುರದ ರೇಣುಕಾ ಪಡತಾರೆ ಮಾತನಾಡಿ, ಈ ಹಿಂದೆ ಸೈಕ್ಲಿಂಗ್‌ಗೆ ಅಷ್ಟಾಗಿ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ, ಇಂದು ಬಿಎಲ್‌ಡಿಇ ಸಂಸ್ಥೆಯಂತಹ ಅನೇಕ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ, ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎ.ಮುಜಾವರ, ಸಂಘಟನಾ ಕಾರ್ಯದರ್ಶಿ ಜಗದೀಶ ಗಸ್ತಿ, ಬಿಎಲ್‌ಡಿಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಡಾ.ಎಸ್.ಎಸ್.ಕೋರಿ, ಡಾ.ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.