ADVERTISEMENT

ಸಿಂದಗಿ | ನಿತ್ಯ ಹಂದಿಗಳ ಸಾವು: ಆತಂಕ

ನೋಟಿಸ್‌ ನೀಡಿದರೂ ಎಚ್ಚೆತ್ತುಕೊಳ್ಳದ ಹಂದಿ ಸಾಕಾಣಿಕೆ ಮಾಲೀಕರು

ಶಾಂತೂ ಹಿರೇಮಠ
Published 11 ಜನವರಿ 2024, 6:34 IST
Last Updated 11 ಜನವರಿ 2024, 6:34 IST
ಸಿಂದಗಿ ಪಟ್ಟಣದ 23ನೇ ವಾರ್ಡ್ ಶಾಂತವೀರ ನಗರದಲ್ಲಿ ಪುರಸಭೆ ಕಾರ್ಮಿಕರು ಸತ್ತ ಹಂದಿಯನ್ನು ಸಾಗಿಸಿದರು
ಸಿಂದಗಿ ಪಟ್ಟಣದ 23ನೇ ವಾರ್ಡ್ ಶಾಂತವೀರ ನಗರದಲ್ಲಿ ಪುರಸಭೆ ಕಾರ್ಮಿಕರು ಸತ್ತ ಹಂದಿಯನ್ನು ಸಾಗಿಸಿದರು   

ಸಿಂದಗಿ: ಪಟ್ಟಣದ ಬಡಾವಣೆಗಳ ವಿವಿಧ ವಾರ್ಡ್‌ಗಳಲ್ಲಿ ನಿತ್ಯ 20-30 ಹಂದಿಗಳು ಸಾಯುತ್ತಿದ್ದು,  ಬಡಾವಣೆಗಳಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಪುರಸಭೆ ಕಾರ್ಯಾಲಯದ ಸಿಬ್ಬಂದಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಂದಿಗಳ ಸಾಕಾಣಿಕೆ ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಹಂದಿಗಳ ಸಾವಿನ ಕುರಿತು ಮತ್ತು ಹಂದಿಗಳ ಸಂಖ್ಯೆ ಹೆಚ್ಚಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ  ಪುರಸಭೆ ಕಾರ್ಯಾಲಯದಲ್ಲಿ ಹಂದಿಗಳ ಸಾಕಾಣಿಕೆ ಮಾಲೀಕರು ಹಾಗೂ ಪಶು ವೈದ್ಯರ ಸಭೆ ನಡೆಸಲಾಗಿತ್ತು. ಆದರೂ ಸಭೆಯ ಪರಿಣಾಮ ಮಾತ್ರ ಶೂನ್ಯವಾಗಿದೆ ಎಂದು ಪುರಸಭೆ ಅಧಿಕಾರಿಯೇ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಈಗಾಗಲೇ ಹಂದಿಗಳ ಸಾಕಾಣಿಕೆಯವರಿಗೆ ಎಚ್ಚರಿಕೆ ನೋಟಿಸು ನೀಡಲಾಗಿತ್ತು. ಮತ್ತೊಮ್ಮೆ ನೋಟಿಸ್‌ ನೀಡಿ ಹಂದಿಗಳನ್ನು ಹುಬ್ಬಳ್ಳಿ-ಪುಣೆಯಲ್ಲಿರುವ ಹಂದಿ ಹಿಡಿಯುವವರನ್ನು ಕರೆಯಿಸಿ ಬೇರೆಡೆ ಸಾಗಿಸುವ ಪ್ರಯತ್ನದಲ್ಲಿದ್ದೇವೆ ಎನ್ನುತ್ತಾರೆ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಉಸ್ತಾದ.

ನಿತ್ಯ ಪಟ್ಟಣದಲ್ಲಿ ಸಾಯುವ ಹಂದಿಗಳನ್ನು ಸಾಗಿಸಲು ಪ್ರತ್ಯೇಕ ಒಂದು ವಾಹನ ಸಿದ್ಧವಾಗಿರುತ್ತದೆ. ಹಂದಿಗಳನ್ನು ಸಾಗಿಸುವ ಪೌರ ಕಾರ್ಮಿಕರು ದುರ್ನಾತದಿಂದ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕೆಲಸ ಮಾಡುವ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ  ಪುರಸಭೆ ಕಾರ್ಯಾಲಯದಿಂದ ಸುರಕ್ಷಿತ ಸಾಧನ ಸಾಮಗ್ರಿಗಳು ನೀಡಬೇಕು. ಅವುಗಳಿಲ್ಲದೇ ಹಂದಿಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಹಂದಿಗಳ ಸಾಕಾಣಿಕೆ ಮಾಲೀಕರ ನಿರ್ಲಕ್ಷ್ಯದಿಂದ ಹಂದಿಗಳ ಸಾವಿನ ಸಂಖ್ಯೆ ದಿನ, ದಿನಕ್ಕೆ ಹೆಚ್ಚುತ್ತಲೇ ಇದೆ. ಪುರಸಭೆ ಅಧಿಕಾರಿ ವರ್ಗ ಹಂದಿಗಳನ್ನು ಬೇರೆಡೆ ಸಾಗಿಸುವ ಕಾರ್ಯವನ್ನಾದರೂ ಬೇಗ ಮಾಡಬೇಕು ಎಂದು 23ನೆಯ ವಾರ್ಡ್ ಶಾಂತವೀರನಗರದ ನಿವಾಸಿ ವಿಜಯಕುಮಾರ ಪತ್ತಾರ ಒತ್ತಾಯಿಸಿದ್ದಾರೆ.

ವಾರಕ್ಕೆ 80ಕ್ಕೂ ಅಧಿಕ ಹಂದಿಗಳು ಸತ್ತಿವೆ ಎಂದು ದೂರು ಬಂದಿದೆ. ಹಂದಿ ಸಾಕಾಣಿಕೆಯವರಿಗೆ ನೋಟಿಸ್‌ ಕೊಡಲಾಗಿದೆ
-ನಬಿರಸೂಲ ಉಸ್ತಾದ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ
ಪಟ್ಟಣದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಹಂದಿಗಳ ಸಾವು ಮುಂದುವರೆದಿದೆ. ಸತ್ತ ಹಂದಿಗಳನ್ನು ಎಲ್ಲೆಲ್ಲೊ ಎಸೆಯುತ್ತಾರೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
- ಅಶೋಕ ಅಲ್ಲಾಪೂರ ನಗರ ಸುಧಾರಣಾ ವೇದಿಕೆ ಅಧ್ಯಕ್ಷ
ಹಂದಿಗಳ ಸಾವಿಗೆ ಕಾರಣ ಹುಡುಕಲು ಸತ್ತ ಹಂದಿಯ ಪರೀಕ್ಷೆ ನಡೆಸಬೇಕಾಗುತ್ತದೆ. ನಂತರ ವ್ಯಾಕ್ಸಿನ್ ಚಿಕಿತ್ಸೆ ನೀಡಬಹುದು. ಪುರಸಭೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿತ್ತು
- ಡಾ.ಮಾರುತಿ ತಡ್ಲಗಿ ಮುಖ್ಯ ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.