ADVERTISEMENT

‘ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡಿ’

ಕೊರೊನಾ ವೈರಸ್‌ ಭೀತಿ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 15:26 IST
Last Updated 14 ಮಾರ್ಚ್ 2020, 15:26 IST
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ಜರುಗಿತು
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ಜರುಗಿತು   

ವಿಜಯಪುರ: ‘ಕೊರೊನಾ ವೈರಸ್‌ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುವ ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಆರೋಗ್ಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಭೆಯಲ್ಲಿ ಅವರು ಮಾತನಾಡಿದರು.

‘ವಿದೇಶದಿಂದ ಬರುವ ಪ್ರಯಾಣಿಕರಲ್ಲಿ ಅಪಾಯಕಾರಿ ಕೋವಿಡ್ -19 ರೋಗ ಲಕ್ಷಣ ಇಲ್ಲದಿದ್ದರೂ ಕೂಡ 14 ದಿನ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಅಂತಹ ಮನೆಗಳ ಸಮೀಪ ನಿಯೋಜಿಸಿ, ತೀವ್ರ ನಿಗಾ ಇರಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ, ಕಲಕೇರಿ, ತಂಗಡಗಿ ಸೇರಿದಂತೆ ವಿವಿಧ ಭಾಗಗಳಿಗೆ ವಿದೇಶದಿಂದ ಮರಳಿರುವ ಪ್ರಯಾಣಿಕರ ಬಗ್ಗೆಯೂ ತೀವ್ರ ನಿಗಾ ಇಡಲಾಗಿದ್ದು, ಈ ಕುರಿತು ಪರಿಶೀಲನೆಗೆ ಹಿರಿಯ ವೈದ್ಯರನ್ನು ಕಳುಹಿಸಲಾಗುತ್ತಿದೆ. ಕೊರೊನಾ ವೈರಸ್ ಲಕ್ಷಣಗಳ ಬಗ್ಗೆ ಮತ್ತು ನಿರ್ದೇಶನಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮೂಲಕ ನೀಡಲಾಗಿದೆ. ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡುಬಂದ ತಕ್ಷಣ ಸಂಬಂಧಿಸಿದ ಪ್ರಯೋಗಾಲಯಗಳಿಗೆ ಅವರ ಗಂಟಲು ಸ್ವ್ಯಾಬ್ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ವರದಿಯನ್ನು ಪಡೆಯಲಾಗುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಗೆ 2020ರ ಫೆಬ್ರುವರಿ 1ರಿಂದ ಬಂದಿರುವ 26 ವಿದೇಶಿ ಪ್ರಯಾಣಿಕರನ್ನು ಗುರುತಿಸಲಾಗಿದೆ. ಈ ಪೈಕಿ ನಾಲ್ಕು ಜನರ ಸ್ವ್ಯಾಬ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿದೇಶಿ ಪ್ರವಾಸ ಮುಗಿಸಿ ತಮ್ಮ ತಮ್ಮ ಗ್ರಾಮಗಳಿಗೆ ಬಂದಿರುವ ಭಾರತೀಯರು ಸ್ವಯಂ ಪ್ರೇರಣೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ (94498 43043) ಅಥವಾ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಬಿ ಬಿರಾದಾರ (95382 40225) ಇವರಿಗೆ ತಮ್ಮ ಮಾಹಿತಿಯನ್ನು ನೀಡಬೇಕು’ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.