ADVERTISEMENT

ಮರಗಳ ಮಾರಣ ಹೋಮ; ಪರಿಸರ ಪ್ರೇಮಿಗಳ ಆಕ್ರೋಶ

ನಾಲತವಾಡ ಪಟ್ಟಣದ ದ್ವಿಪಥ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:35 IST
Last Updated 4 ಜೂನ್ 2023, 23:35 IST
ನಾಲತವಾಡದ ವೀರೇಶ್ವರ ವೃತ್ತದಲ್ಲಿ ಕಾಲೇಜು ಮುಂಭಾಗದಲ್ಲಿರುವ ಮರ ಕೊಡಲಿ ಏಟಿಗೆ ಗುರಿಯಾಗಿರುವುದು
ನಾಲತವಾಡದ ವೀರೇಶ್ವರ ವೃತ್ತದಲ್ಲಿ ಕಾಲೇಜು ಮುಂಭಾಗದಲ್ಲಿರುವ ಮರ ಕೊಡಲಿ ಏಟಿಗೆ ಗುರಿಯಾಗಿರುವುದು   

ಮಹಾಂತೇಶ ವೀ.ನೂಲಿನವರ

ನಾಲತವಾಡ:  ಪಟ್ಟಣದಲ್ಲಿ ಬಜಾರ ಸೇರಿದಂತೆ ಕನ್ನಡ ಗಂಡುಮಕ್ಕಳ ಶಾಲೆಯಿಂದ ಎಪಿಎಂಸಿ ವರೆಗೆ ಮುದ್ದೇಬಿಹಾಳ- ನಾರಾಯಣಪೂರ ರಸ್ತೆ ವಿಸ್ತರಣೆಗೆ ಮೊದಲ ಹಂತದಲ್ಲಿ ಎರಡೂ ಬದಿ ಇದ್ದ ಬೃಹತ್ತಾದ 22 ಮರಗಳನ್ನು  ಕಡಿಯಲಾಗಿದೆ.

ಏಳೆಂಟು ದಶಕದಿಂದ ರಸ್ತೆ ಬದಿ ಬೆಳೆದು ನೆರಳು ನೀಡುತ್ತಿದ್ದ ಹುಣಸೆ, ಬಸರಿ, ಅರಳಿ, ಬೇವು, ಗುಲ್‌ ಮೊಹರ್‌ ಮರಗಳನ್ನು ಟೆಂಡರ್‌ದಾರರು ಬುಡ ಸಮೇತ ಕಡಿದುಕೊಂಡು ಹೋಗಿದ್ದಾರೆ. ಅಭಿವೃದ್ಧಿ ನೆಪದಲ್ಲಿ ದ್ವಿಪಥ ರಸ್ತೆ ಮಾಡಲು ಎರಡನೇ ಹಂತದಲ್ಲಿ ಇತ್ತೀಚೆಗೆ 16 ಮರಗಳಿಗೆ ಕೊಡಲಿ ಏಟು ಬಿದ್ದಿತ್ತು.

ADVERTISEMENT

ಬಜಾರದ ಗಣಪತಿ ಚೌಕ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದಲ್ಲಿ ಸುಮಾರು 70 ವರ್ಷಗಳಿಂದ ಸಾವಿರಾರು ಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಮರಗಳು ಕೊಡಲಿ ಏಟಿಗೆ ಬಲಿಯಾಗಿದ್ದರಿಂದ ಪಕ್ಷಿಗಳು ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಕಂಗಾಲಾಗಿವೆ. ಬಸ್ ನಿಲ್ದಾಣದಿಂದ ಎಪಿಎಂಸಿ ವರೆಗಿನ ರಸ್ತೆಯ ಎರಡೂ ಬದಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು ಇಲ್ಲವಾಗಿದ್ದು, ಪರಿಸರ ಬಿಸಿಲಿನಿಂದ ರಣಗುಡುತ್ತಿದೆ.

ಮರಗಳ ಮಾರಣ ಹೋಮದಿಂದ ಮುದ್ದೇಬಿಹಾಳ ರಸ್ತೆಯ ಅಂದ ಹಾಳಾಗಿದೆ. ಕಟ್ಟಡ ಬಿಟ್ಟರೆ ಏನೊಂದು ಕಾಣುತ್ತಿಲ್ಲ. ವೀರೇಶ್ವರ ಕಾಲೇಜು ಮುಂಭಾಗದಲ್ಲಿ ಮರಗಳ ನೆರಳು ಇಲ್ಲದೆ ರಣಬಿಸಿಲಿನ ತಾಪ ರಾಚುತ್ತಿದೆ.

‘ಒಂದು ಮರ ಬೆಳೆಸಲು 6 ರಿಂದ 12 ವರ್ಷ ಜತನದಿಂದ ಕಾಯಬೇಕು. ಅದು ತನ್ನ ಜೀವಿತಾವಧಿಯಲ್ಲಿ ಮನುಷ್ಯನಿಗೆ ಕೋಟ್ಯಂತರ ರೂ.ಗಳಷ್ಟು ಪರೋಕ್ಷ ವಾಗಿ ಅನುಕೂಲ ನೀಡುತ್ತದೆ. ಈಗಿದ್ದಾಗ ಅಭಿವೃದ್ಧಿ ನೆಪದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಮಾಡಲು ಮರಗಳನ್ನು ಕಡಿದಿರುವುದು ಎಷ್ಟರ ಮಟ್ಟಿಗೆ ಸರಿ. ಒಂದು ಮರ ಕಡಿದರೆ ಅದರ ಅಕ್ಕ ಪಕ್ಕ 10 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡಬೇಕು’ ಎಂದು ಮಾತೋಶ್ರೀ ನಿಂಬೆಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟರ ಒತ್ತಾಯಿಸಿದ್ದಾರೆ.

ನಾಲತವಾಡ ಪಟ್ಟಣ ಅಗಾಧವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಿದೆ. ಇದಕ್ಕೆ ಸರಿಯಾಗಿ ಹೆಚ್ಚು ವಾಹನಗಳು ರಸ್ತೆಗೆ ಇಳಿದಿವೆ. ಇದರಿಂದ ವಿಪರೀತ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ. ಟ್ರಾಫಿಕ್‌ ಸಮಸ್ಯೆ ನಿಯಂತ್ರಿಸಲು ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಅಗತ್ಯ. ಆದರೆ, ಮರ ಕಡಿಯುವ ಮುನ್ನ ಅಕ್ಕ ಪಕ್ಕ ಗಿಡ ನೆಟ್ಟು ಪೋಷಿಸಬೇಕು ಎಂದು ವಕೀಲ ಬಿ.ಎಂ.ತಾಳಿಕೋಟಿ ತಿಳಿಸಿದ್ದಾರೆ.

ನಾಲತವಾಡದ ವೀರೇಶ್ವರ ವೃತ್ತದಲ್ಲಿ ಕಾಲೇಜು ಮುಂಭಾಗದಲ್ಲಿರುವ ಮರ ಕೊಡಲಿ ಏಟಿಗೆ ಗುರಿಯಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.